ವಿಜಯಪುರದ ಗೃಹ ಕಚೇರಿಯಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ. ಎಂ.ಬಿ. ಪಾಟೀಲ ಸುದ್ದಿಗೋಷ್ಠಿ ನಡೆಸಿದರು.  
ಜಿಲ್ಲೆ

ಡಿಸೆಂಬರ್‌ಗೆ ಡಿ.ಕೆ. ಶಿವಕುಮಾರ ಸಿಎಂ ಆಗ್ತಾರೆ, ಶಾಸಕ ಇಕ್ಬಾಲ್ ಹುಸೇನ ಹೇಳಿಕೆಗೆ ಸಚಿವ ಎಂ.ಬಿ. ಪಾಟೀಲ ಹೇಳಿದ್ದೇನು ಗೊತ್ತಾ?

ವಿಜಯಪುರ: ‘ಡಿಸೆಂಬರ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ ಸಿಎಂ ಆಗ್ತಾರೆ’ ಎಂಬ ಶಾಸಕ ಇಕ್ಬಾಲ್ ಹುಸೇನ ಹೇಳಿಕೆಗೆ ಪ್ರತಿಯಾಗಿ ‘ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ; ಸದ್ಯಕ್ಕೆ ಸಿಎಂ ಇದ್ದಾರೆ’ ಎನ್ನುವ ಮೂಲಕ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಸಿಎಂ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡೋದು ಹೈಕಮಾಂಡ್. ಅದು ಇಕ್ಬಾಲ್ ಕೈಯಲ್ಲೂ ಇಲ್ಲ; ಎಂ.ಬಿ. ಪಾಟೀಲರ ಕೈಯಲ್ಲಿಯೂ ಇಲ್ಲ ಎಂದು ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.

ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಗೊತ್ತಿಲ್ಲ. ಕೆ.ಎನ್. ರಾಜಣ್ಣ ಹಿರಿಯರು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಸದ್ಯಕ್ಕೆ ಯಾವುದೇ ಕ್ರಾಂತಿ ಕಾಂಗ್ರೆಸ್‌ನಲ್ಲಿ ಇಲ್ಲ. ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ. ಸ್ವಾತಂತ್ರೃಕ್ಕಾದ ಕ್ರಾಂತಿ ಬಿಟ್ಟರೆ ಕಾಂಗ್ರೆಸ್‌ನಲ್ಲಿ ಬೇರೆ ಕ್ರಾಂತಿ ಇಲ್ಲ ಎಂದು ನಗೆ ಚಟಾಕಿ ಹಾರಿಸಿದರಲ್ಲದೇ ಬಹುಶಃ ಜನತಾದಳ ಮತ್ತು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಬಹುದೆಂದರು.

ಆಶ್ರಯ ಮನೆ ಹಂಚಿಕೆ ವಿಚಾರದಲ್ಲಿ ಆಡಳಿತ ಪಕ್ಷದ ಶಾಸಕರಿಂದಲೇ ಕೇಳಿ ಬರುತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಆಳಂದ ಶಾಸಕ ಬಿ.ಆರ್. ಪಾಟೀಲರ ಹೇಳಿಕೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಪರಿಶೀಲಿಸುತ್ತಿದ್ದಾರೆ. ಬಿ.ಆರ್. ಪಾಟೀಲರಿಗೂ ಯಾರೂ ಸದಸ್ಯರು ಹೇಳಿದ್ದಾರೆ. ಹೀಗಾಗಿ ಸಿಎಂ ಕರೆದು ಮಾತನಾಡಿದ್ದಾರೆ. ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ. ಎಲ್ಲೋ ಒಂದು ಕಡೆ ಗ್ರಾಮ ಪಂಚಾಯಿತಿ ಸದಸ್ಯರು ಲಂಚ ತೆಗೆದುಕೊಂಡರೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಗ್ರಾಮ ಪಂಚಾಯಿತಿ ಸದಸ್ಯ ಕೇಳಿದರೆ ಮನೆ ಹಂಚಿಕೆ ಮಾಡಲಿಕ್ಕಾಗಲ್ಲ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸಮೀಕ್ಷೆ ನಡೆಸಿ ನೀಡುವ ವರದಿ ಆಧರಿಸಿ ನೀಡಲಾಗುತ್ತದೆ ಎಂದರು.