ಜಿಲ್ಲೆ

ಚನ್ನಪಟ್ಟಣ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಕೆಶಿನಾ? ಮಗಳು ಐಶ್ವರ್ಯನಾ?

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್​​ ಅವರು ಸೋತಿರುವ ಬೆನ್ನಲ್ಲೇ ಡಿ ಕೆ ಶಿವಕುಮಾರ್​​ ಅವರು ತಮ್ಮನಿಗಾಗಿ ಕನಕಪುರ ಕ್ಷೇತ್ರವನ್ನು ತ್ಯಾಗ ಮಾಡಿ ಚೆನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ ಈ ಸುದ್ದಿ ಬೆನ್ನಲ್ಲೇ ಇದೀಗ ಡಿ ಕೆ ಶಿವಕುಮಾರ್​​ ಅವರ ಪುತ್ರಿ ಐಶ್ವರ್ಯ ಹೆಸರು ಕೂಡಾ ಕೇಳಿ ಬಂದಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಪ್ಪ ಡಿಕೆ ಸುರೇಶ್​​ ಪರ ಐಶ್ವರ್ಯ ಪ್ರಚಾರ ಮಾಡಿದ್ದರು. ಅವರನ್ನೇ ಏಕೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಲ್ಲಿಸಬಾರದು ಅಂತ ಚಿಂತನೆ ನಡೆದಿದೆ. ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಡಿಕೆಶಿನಾ ಇಲ್ಲ ಮಗಳು ಐಶ್ವರ್ಯನಾ? ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.

ಕೇಂದ್ರ ಸಚಿವ ಎಚ್​ ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿದ್ದ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ್ತೊಮ್ಮೆ ಹೈವೋಲ್ಟೇಜ್​​ ಆಗಿ ರಾಜ್ಯದ ಗಮನ ಸೆಳೆಯಲಿದ್ದು, ಡಿಸಿಎಂ ಡಿ ಕೆ ಶಿವಕುಮಾರ್​​ ಅವರ ಪುತ್ರಿ ಐಶ್ವರ್ಯ ಹೆಗ್ಡೆ ಕಾಂಗ್ರೆಸ್​​ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಎನ್ನುವ ಸುದ್ದಿಯೊಂದಿದೆ.

ಲೋಕಸಭಾ ಚುನಾವಣೆಯಲ್ಲಿ ಡಿಕೆ ಸೋದರರು ಹಾಗೂ ದೇವೇಗೌಡರ ಕುಟುಂಬದ ನಡುವಿನ ಜಿದ್ದಾಜಿದ್ದಿ ಹೋರಾಟದಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಗಮನ ಸೆಳೆದಿತ್ತು. ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ಡಿ.ಕೆ.ಸುರೇಶ್ ಅವರು ಚನ್ನಪಟ್ಟಣದಲ್ಲಿ ಉಪಚುನಾವಣೆ ಸ್ಪರ್ಧೆಗೆ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಐಶ್ವರ್ಯಾ ಅವರನ್ನು ಕಣಕ್ಕಿಳಿಸುವ ತೀರ್ಮಾನಕ್ಕೆ ಡಿಕೆಶಿ ಕುಟುಂಬ ಬಂದಿದೆ ಎನ್ನಲಾಗಿದೆ. ಐಶ್ವರ್ಯಾ ಅವರನ್ನು ಈ ಉಪಚುನಾವಣೆ ಮೂಲಕ ರಾಜಕಾರಣಕ್ಕೆ ಪರಿಚಯಿಸಲು ತೀರ್ಮಾನಿ ಸಲಾಗಿದ್ದು, ಅದಕ್ಕಾಗಿ ಪೂರಕ ವೇದಿಕೆಯನ್ನು ಅಣಿಗೊಳಿಸಲಾಗುತ್ತಿದೆ ಎಂದು ಡಿಸಿಎಂ ಆಪ್ತ ಮೂಲಗಳು ಹೇಳಿವೆ.