ಭಾರತೀನಗರ ಸಮೀಪದ ಚಂದೂಪುರ ಗ್ರಾಮದ ಡಿ.ಕೆ.ಗೌಡ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಕಿಡ್ಸ್ ಆರ್ಕ್ ಇಂಟರ್ ನ್ಯಾಷನಲ್ ಶಾಲಾ ವಾರ್ಷಿಕೋತ್ಸವನ್ನು ಮದ್ದೂರು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಬಿ.ಕೃಷ್ಣಪ್ಪ ಉದ್ಘಾಟಿಸಿದರು. 
ಜಿಲ್ಲೆ

ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಜ್ಞಾನವಂತರಾಗಲಿ

ನಾಗೇಶ ಎಸ್

ಕೆ.ಎಂ.ದೊಡ್ಡಿ: ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಜ್ಞಾನವಂತರಾಗಿ ಸಾರ್ಥಕ ಜೀವನ ನಡೆಸಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕಿವಿಮಾತು ಹೇಳಿದರು.

ಸಮೀಪದ ಚಂದೂಪುರ ಗ್ರಾಮದ ಡಿ.ಕೆ.ಗೌಡ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಿಡ್ಸ್ ಆರ್ಕ್ ಇಂಟರ್ ನ್ಯಾಷನಲ್ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮದ ಮೂಲ ಮಹಾನ್ ಸಾಧನೆಗೆ ಮುಂದಾಗಬೇಕು. ಶಿಕ್ಷಣದ ಜತೆಗೆ ಆಧ್ಯಾತ್ಮಿಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ಇದಕ್ಕಾಗಿ ಮಹಾನ್ ವ್ಯಕ್ತಿಗಳು ಮತ್ತು ಸಿದ್ಧ ಪುರುಷರಗಳ ಬಗ್ಗೆ ಅಧ್ಯಾಯನ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಶಾಲೆ ಕಟ್ಟುವ ಕಾಯಕದ ಮೂಲಕ ಪ್ರತಿಭೆಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೈಪೋಟಿ ನೀಡಲು ಅವಕಾಶ ನೀಡಿರುವ ಡಿ.ಕೆ ಗೌಡ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಡಿ.ಕೆ.ಗೌಡ ಸಂಸ್ಥೆ ಕಾರ್ಯದರ್ಶಿ ಚಂದೂಪುರ ಶಿವಲಿಂಗೇಗೌಡ ಮಾತನಾಡಿ, ಗುರು ಹಿರಿಯರ ಬಗ್ಗೆ ಭಕ್ತಿ ಗೌರವ ಬೆಳೆಸಿಕೊಳ್ಳವುದೇ ನೈಜ ಶಿಕ್ಷಣದ ತಳಹದಿ. ಡಿ.ಕೆ.ಗೌಡ ಪ್ರೌಢಶಾಲೆಯಲ್ಲಿ ವಿಶೇಷವಾಗಿ ನೈತಿಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಶಾಲೆಯ ಮಕ್ಕಳು ಶೈಕ್ಷಣಿಕ ಸಾಧನೆ ಮಾಡುತ್ತಾ ಕ್ರೀಡಾ ಚಟುವಟಿಕೆಗಳಲ್ಲಿ ಕೀರ್ತಿ ತರುತ್ತಿದ್ದಾರೆ ಎಂದರು.

ಮದ್ದೂರು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಬಿ.ಕೃಷ್ಣಪ್ಪ ಮಾತನಾಡಿ, ಪ್ರಾಥಮಿಕ ಹಂತದಿಂದ ಪ್ರೌಢಶಾಲೆಯವರೆಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತ ಕನ್ನಡ ಪ್ರೇಮ ಮೆರೆಯುತ್ತಿರುವ ಡಿ.ಕೆ.ಗೌಡ ಸಂಸ್ಥೆಯ ಕಾರ್ಯ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಚಂದುಪೂರದ ರೇಣುಕಾಚಾರ್ಯಮಠದ ಶ್ರೀ ಶಿವಲಿಂಗ ಶಿವಚಾರ್ಯಸ್ವಾಮೀಜಿ, ಬೆಂಗಳೂರಿನ ಕಿಡ್ಸ್ ಆರ್ಕ್ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲೆ ಎನ್. ಶಶಿರೇಖಾ, ಮುಖ್ಯ ಶಿಕ್ಷಕ ಶಿವಮಾದೇಗೌಡ ಇದ್ದರು.