ಜಿಲ್ಲೆ

ಅರಸು ಆಶಯದಂತೆ ಆಡಳಿತ: ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ.ದೇವರಾಜ ಅರಸು ಅವರ ಆಶಯದ ಹಾದಿಯಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಸಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅರಸು ಅವರು ತಮ್ಮ ಅಧಿಕಾರಾವಧಿಯಲ್ಲಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಮತ್ತು ಎಲ್ಲ ಸಮುದಾಯದ ಕೃಷಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದರು. ಶೋಷಿತರ ಧ್ವನಿಯಾಗಿದ್ದರು. ಇವರ ಆಡಳಿತದ ಮಾದರಿಯಲ್ಲೇ ನಮ್ಮ ಸರ್ಕಾರವು ಕಾರ್ಯೋನ್ಮುಖವಾಗಿದೆ ಎಂದು ವಿವರಿಸಿದರು.

ಅರಸು ಅವರು ಮುಖ್ಯಮಂತ್ರಿಗಳಾಗಿ ಎರಡು ಬಾರಿ ನೀಡಿದ ಜನಪರ ಆಡಳಿತ ಮಾದರಿಯಾಗಿದೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡುವ ಮೂಲಕ ಕನ್ನಡದ ಬದ್ಧತೆಯನ್ನು ಮೆರೆದರು. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದರು. ನಿರುದ್ಯೋಗ ಭತ್ಯೆ, ಜೀತ ಪದ್ಧತಿ ನಿರ್ಮೂಲನೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಹಲವು ಕಾರ್ಯಕ್ರಮಗಳು ಅರಸು ಅವರ ಸಾಮಾಜಿಕ ಬದ್ಧತೆಯನ್ನು ತೋರುತ್ತದೆ. ಸಿದ್ದರಾಮಯ್ಯ ಅವರ ಸೇವೆ ಕೂಡ ಇದೇ ಮಾದರಿಯಲ್ಲಿದೆ ಎಂದು ಬಣ್ಣಿಸಿದರು.

ಶಾಸಕ ರವಿಕುಮಾರ್ ಗಣಿಗ ಮಾತನಾಡಿ, 12ನೇ ಶತಮಾನದಲ್ಲಿ ತುಳಿತಕ್ಕೊಳಗಾದವರ ದನಿಯಾಗಿ ಬಸವಣ್ಣನವರು ಕಾಣಿಸಿಕೊಂಡಂತೆ 80ರ ದಶಕದಲ್ಲಿ ಡಿ.ದೇವರಾಜ ಅರಸು ಕೂಡ ಎಲ್ಲ ಶೋಷಿತ ಸಮುದಾಯಗಳ ಪರವಾಗಿ ಕೆಲಸ ಮಾಡಿದರು. ಸಿದ್ದರಾಮಯ್ಯ ಅವರ ಸರ್ಕಾರ ಕೂಡ ಅರಸು ಹಾದಿಯಲ್ಲೇ ಮುನ್ನಡೆಯುತ್ತಿದೆ ಎಂದು ಹೇಳಿದರು.

ಅರಸು ಅವರು ಬಸ್ ಚಾರ್ಜ್ ಇಲ್ಲದ ವೃದ್ಧೆಯೊಬ್ಬರಿಗೆ ತಮ್ಮ ಕಿಸೆಯಿಂದ ಹಣ ಕೊಟ್ಟರು. ಸಿದ್ದರಾಮಯ್ಯ ಅವರು ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣ ಭಾಗ್ಯವನ್ನು ಕಲ್ಪಿಸಿದ್ದಾರೆ. ಅಂದು ಅರಸು ಭಾಗ್ಯಜ್ಯೋತಿಯನ್ನು ಜಾರಿಗೊಳಿಸಿದಂತೆ ಇಂದು ನಮ್ಮ ಸರ್ಕಾರ ಗೃಹ ಜ್ಯೋತಿಯನ್ನು ತಂದಿದೆ. ಅದೇ ರೀತಿ ಅನ್ನಭಾಗ್ಯ, ಗೃಹಲಕ್ಷ್ಮೀಯಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವ ಸಿದ್ದರಾಮಯ್ಯ ಅವರಿಗೆ ಜನರ ಆಶೀರ್ವಾದ ಇದೆ ಎಂದು ತಿಳಿಸಿದರು.

ಉಪನ್ಯಾಸ ನೀಡಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎನ್.ಲಿಂಗಪ್ಪ, ಎಲ್.ಜೆ.ಹಾವನೂರು ವರದಿ ಮೂಲಕ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದರು. ರಾಜಕೀಯವಾಗಿ ಅತಿ ಹಿಂದುಳಿದ ಸಮುದಾಯಗಳಿಗೆ ಶಕ್ತಿಯನ್ನು ನೀಡುವ ಕೆಲಸವನ್ನು ಅರಸು ಮಾಡಿದರು. ಜತೆಗೆ ಎಲ್ಲ ಜಾತಿಯ ಬಡವರ ಶ್ರೇಯೋಭಿವೃದ್ಧಿಗಾಗಿ 20 ಅಂಶಗಳ ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ಮಹನೀಯ ಎಂದು ಬಣ್ಣಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಉಪವಿಭಾಗಾಧಿಕಾರಿ ಶಿವಮೂರ್ತಿ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀನಿವಾಸ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ವಿವಿಧ ಹಿಂದುಳಿದ ಸಮುದಾಯದ ಮುಖಂಡರಾದ ಅಮ್ಜದ್‌ಪಾಷ, ಎಂ. ಕೃಷ್ಣ, ಎಚ್.ಪಿ. ಸತೀಶ್, ಶಂಕರಯ್ಯ, ಸಿ. ಸಿದ್ದಶೆಟ್ಟಿ, ಪ್ರತಾಪ್, ಡಿ. ರಮೇಶ್, ರಾಜು ಇತರರು ಉಪಸ್ಥಿತರಿದ್ದರು.

ಇದೇ ವೇಳೆ ಎಸ್‌ಎಸ್‌ಎಲ್ಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಡಿ.ದೇವರಾಜ ಅರಸು ಅವರ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು. ಸಮಾರಂಭಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಿಂದ ಅಂಬೇಡ್ಕರ್ ಭವನದವರೆಗೆ ವಿವಿಧ ಕಲಾತಂಡಗಳೊಡನೆ ಅರಸು ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.