ಮೈಸೂರು: ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ನೂತನ ಕಚೇರಿ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪ್ರತಿಮೆಯನ್ನು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಸಿದ್ದರಾಮಯ್ಯ, ಮೈಸೂರಿನವರಾದ ದೇವರಾಜ ಅರಸು 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದರು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಾನು ಜನತಾ ಪರಿವಾರದಲ್ಲಿದ್ದೆ, ದೇವರಾಜ ಅರಸು ಕಾಂಗ್ರೆಸ್‌ನಲ್ಲಿದ್ದರು. ದೇವರಾಜ ಅರಸು ಸಾಮಾಜಿಕ ನ್ಯಾಯ ಬದ್ಧತೆ ವಿಚಾರದಲ್ಲಿ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದರು.
ಅಸಮಾನತೆ ಹೋಗಲಾಡಿಸಲು ದೇವರಾಜ ಅರಸು ಶ್ರಮಿಸಿದ್ದರು. ಪ್ರಾತಿನಿಧ್ಯತೆ ಇಲ್ಲದ ಸಣ್ಣ ಸಮುದಾಯಗಳಿಗೆ ಅವಕಾಶ ನೀಡಿದರು. ಇದರಿಂದ ಹಲವು ಸೂಕ್ಷ್ಮ ಸಮುದಾಯದ ಜನ ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವಾಯಿತು. ನೊಂದವರ ಪರ ಇದ್ದ ಡಿ.ದೇವರಾಜ ಅರಸು ಅವರ ಕಾರ್ಯವೈಖರಿ ಇತರೆ ರಾಜಕಾರಣಿಗಳಿಗೆ ಮಾದರಿಯಾಗಿದೆ. ಸಮಾಜದಲ್ಲಿರುವ ಅಸಮಾನತೆ ಹೋಗಲಾಡಿಸಲು ರಾಜಕಾರಣಿಗಳು ಮುಂದಾಗಬೇಕು. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.
ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿರುವ ಸಮುದಾಯಗಳಿಗೆ ದೇವರಾಜ ಅರಸು ನ್ಯಾಯ ಒದಗಿಸುವ ಕೆಲಸ ಮಾಡಿದರು. ದೇವರು ನಮಗೆ ವರವೂ ನೀಡುವುದಿಲ್ಲ, ಶಾಪವೂ ನೀಡುವುದಿಲ್ಲ. ಆದರೆ ಅವಕಾಶ ನೀಡುತ್ತದೆ. ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣ. ಆ ಕಾರಣದಿಂದಾಗಿಯೇ ದೇವರಾಜ ಅರಸು ಅವರು ಸಣ್ಣ ಪುಟ್ಟ ಸಮುದಾಯಗಳಿಗೆ ಅವಕಾಶ ಕಲ್ಪಿಸಿಕೊಟ್ಟರು. ಅವಕಾಶ ವಂಚಿತ ಸಮಾಜಗಳಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಿದ್ದಾರೆ. ಸಮಾಜದಲ್ಲಿರುವ ತಪ್ಪುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇಂದಿಗೂ ಅಸಮಾನತೆ ಇದೆ. ಸಂವಿಧಾನ ಜಾರಿಯಾಗಿದ್ದರು, ಅಸ್ಪಶ್ಯತೆ, ಅಸಮಾನತೆ ಇಂದಿಗೂ ಆಚರಣೆಯಲ್ಲಿದೆ. ಅದನ್ನು ಹೋಗಲಾಡಿಸಬೇಕಾದ ಕರ್ತವ್ಯ ನಮ್ಮದಾಗಿದೆ. ಜಾತಿ ವ್ಯವಸ್ಥೆಯಿಂದ ಅಸಮಾನತೆ ಉಂಟಾಗಿದೆ, ಕೆಲವು ಸಮಾಜಗಳು ಅಕ್ಷರ ಸಂಸ್ಕೃತಿಯಿಂದ ದೂರ ಇದ್ದ ಹಿನ್ನೆಲೆಯಲ್ಲಿ ವೈರುಧ್ಯ, ಅಸಮಾನತೆ ಉಂಟಾಗಿದೆ. ನಮ್ಮ ಸರ್ಕಾರ ಅಸಮಾನತೆಯನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ವಿದ್ಯೆ ಯಾರ ಅಪ್ಪನ ಸ್ವತ್ತಲ್ಲ. ಹಾಗಾಗಿ ಅವಕಾಶ ಬಳಸಿಕೊಂಡು ಶಿಕ್ಷಣ ಪಡೆದು ಸಾಧನೆ ಮಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ದೇವರಾಜ ಅರಸು ಅವರ ಪ್ರತಿಮೆ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನೆರವೇರಬೇಕಿತ್ತು. ನವೆಂಬರ್ 15ಕ್ಕೆ ಉದ್ಘಾಟನೆ ಮಾಡಲು ಚಿಂತನೆ ನಡೆಸಲಾಗಿತ್ತು. ಆದರೆ, ಇಂದು ಉದ್ಘಾಟನೆ ನೆರವೇರಿದೆ. ಮೈಸೂರು ಜಿಲ್ಲೆ ದೇವರಾಜ ಅರಸು ಅವರ ಜನ್ಮಭೂಮಿ. ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅವರ ಪ್ರತಿಮೆ ನಿರ್ಮಿಸುವ ಚಿಂತನೆ ಮೊದಲಿನಿಂದಲೂ ಇತ್ತು. ಸಾಕಷ್ಟು ಜನ ಪ್ರತಿಮೆ ನಿರ್ಮಾಣಕ್ಕೆ ಅಪೇಕ್ಷೆ ಪಟ್ಟಿದ್ದರು. ಜನರ ಅಪೇಕ್ಷೆಯನ್ನು ನಮ್ಮ ಸರ್ಕಾರ ಈಡೇರಿಸಿದೆ ಎಂದರು.
ಏಕೀಕರಣವಾಗಿದ್ದರೂ ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದ್ದು, ಡಿ.ದೇವರಾಜ ಅರಸು. ಕರ್ನಾಟಕ ಎಂದು ನಾಮಕರಣ ಮಾಡಿ 52ವರ್ಷಗಳು ಕಳೆದಿದೆ. 50ನೇ ವರ್ಷದ ಸಂಭ್ರಮಾಚರಣೆಯನ್ನು ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಮಾಡಬೇಕಾಗಿತ್ತು. ಆದರೆ, ಬಿಜೆಪಿ ಸರ್ಕಾರ ಸಂಭ್ರಮಾಚರಣೆ ಕಾರ್ಯಕ್ರಮ ಮಾಡಿರಲಿಲ್ಲ. ಇದರಿಂದ ನಮ್ಮ ಸರ್ಕಾರ ಕಳೆದ ವರ್ಷ ರಾಜ್ಯದಾದ್ಯಂತ ರಥಯಾತ್ರೆ ನಡೆಸಿದ ಬಳಿಕ ವಿಧಾನಸೌಧದ ಮುಂದೆ ಭುವನೇಶ್ವರಿ ಪ್ರತಿಮೆಯನ್ನು ಅನಾವರಣ ಮಾಡಿದೆ. ದೇವರಾಜ ಅರಸು ಅವರ ಹುಟ್ಟುರಾದ ಕಲ್ಲಹಳ್ಳಿಯಲ್ಲಿ ದೇವರಾಜ ಅರಸು ಅವರ ಸ್ಮಾರಕ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಶಾಸಕ ತನ್ವಿರ್ ಸೇಠ್ ಮಾತನಾಡಿ, ಡಿ ದೇವರಾಜ ಅರಸು ಅವರು ಸಮಾಜದಲ್ಲಿರುವ ಅನಿಷ್ಟ ಪದ್ಧತಿಯನ್ನು ದೂರ ಮಾಡಲು ಪ್ರಯತ್ನಿಸಿದರು. ಶೋಷಿತ ವರ್ಗಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಅವರ ಹುಟ್ಟುರಾದ ಕಲ್ಲಹಳ್ಳಿಯಲ್ಲಿ ಸ್ಮಾರಕ ಮಾಡಿ ಅಭಿವೃದ್ಧಿ ಪಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಶಾಸಕರಾದ ಡಿ.ರವಿಶಂಕರ್, ಸಿ ಪುಟ್ಟರಂಗಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಅಡಗೂರು ಎಚ್.ವಿಶ್ವನಾಥ್, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಡಾ.ಯತಿಂದ್ರ ಸಿದ್ದರಾಮಯ್ಯ, ಕೆ.ಶಿವಕುಮಾರ್, ದೇವರಾಜ ಅರಸು ಪುತ್ರಿ ಭಾರತಿ ಅರಸ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹಾಗೂ ಇತರರು ಇದ್ದರು.