ಜಿಲ್ಲೆ

ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅಧಿಕಾರಾವಧಿಯಲ್ಲಿ ಕರ್ನಾಟಕ ರಾಜ್ಯ ನಾಮಕರಣ ಸೇರಿ ಅನೇಕ ಮಹತ್ವದ ಕಾರ್ಯಗಳಾಗಿವೆ. ಸಾಮಾಜಿಕ ತಾರತಮ್ಯಗಳನ್ನು ನಿವಾರಿಸಿ, ಸಮಾನತೆ ತರಲು ನಿರಂತರವಾಗಿ ಶ್ರಮಿಸಿದ ಸಾಮಾಜಿಕ ನ್ಯಾಯದ ಹರಿಕಾರರಾಗಿ ದೇವರಾಜ ಅರಸು ಇತಿಹಾಸದಲ್ಲಿ ದಾಖಲಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಆಯೋಜಿಸಿದ್ದ ಡಿ. ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದ ಹಿಂದುಳಿದ ವರ್ಗಗಳಿಗೆ ನ್ಯಾಯಯುತ ಅವಕಾಶಗಳು ಮತ್ತು ಸೌಲಭ್ಯಗಳು ದೊರೆಯಲು ಅರಸು ಅವರ ಕೊಡುಗೆ ಮುಖ್ಯವಾಗಿದೆ. ಇಂದಿನ ವ್ಯವಸ್ಥೆಯ ಬದಲಾವಣೆಗೆ ಅವರ ಚಿಂತನೆಗಳು, ಸುಧಾರಣೆಗಳು ಮತ್ತು ಆಡಳಿತಾತ್ಮಕ ಕ್ರಮಗಳು ಅಗತ್ಯವಾಗಿವೆ ಎಂದರು.

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪ್ರೊ. ಶಶಿಧರ ತೊಡಕರ ಹಾಗೂ ಪಾಲಿಕೆ ಸಭಾನಾಯಕ ಈರೇಶ ಅಂಚಟಗೇರಿ ಮಾತನಾಡಿದರು. ಗೋಟಗೋಡಿಯ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ವೆಂಕನಗೌಡ ಪಾಟೀಲ ಅವರು ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಅವರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಭಾನುಮತಿ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ. ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮಾಜದ ರಾಜ್ಯಾಧ್ಯಕ್ಷ ಶಿವಾನಂದ ಪಾಟೀಲ, ಗುರುನಾಥ ಹುಲ್ಲೂರ, ಪರಶುರಾಮ ಚುರುಮುರಿ, ಪ್ರಕಾಶ ಬಿಲಾನಾ, ಆನಂದ ಸಿಂಗನಾಥ, ವಸಂತ ಅರ್ಕಾಚಾರಿ, ಇತರರಿದ್ದರು.