ಶಿಕಾರಿಪುರ: ಡಿ.ದೇವರಾಜ ಅರಸು ಅವರು ಉಪೇಕ್ಷಿತರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದ ಮಹಾನ್ ಚೇತನ. ಹಿಂದುಳಿದ ವರ್ಗಗಳ ಆಶಾಕಿರಣ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಭಾನುವಾರ ನಗರದ ಸಾಂಸ್ಕೃತಿಕ ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪುರಸಭೆ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಡಿ.ದೇವರಾಜ ಅರಸು ಜಯಂತ್ಯುತ್ಸವಕ್ಕೆ ಚಾಲನೆ ನೀಡಿ, ಅರಸು ಅವರ ಕಾಲದಲ್ಲಿ ಸಾಮಾಜಿಕ ನ್ಯಾಯದ, ಸಾಮಾಜಿಕ ಕಳಕಳಿಯ ಕ್ರಾಂತಿಯೇ ಆಯಿತು. ಭೂಹೀನ ಲಕ್ಷೋಪಲಕ್ಷ ಕುಟುಂಬಗಳಿಗೆ ಭೂಮಿ ದೊರೆಯಿತು. ಅರಸು ಅವರ ಕಲ್ಪನೆಗಳಲ್ಲಿ ಸಾಮಾಜಿಕ ನ್ಯಾಯ ಎದ್ದು ಕಾಣುತ್ತಿತ್ತು. ಎಷ್ಟೇ ಅಡೆತಡೆಗಳು ಬಂದರೂ ಬಡವರ, ಹಿಂದುಳಿದವರ, ಉಪೇಕ್ಷಿತರ ವಿಚಾರ ಬಂದಾಗ ಅರಸು ಅವರು ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುತ್ತಿರಲಿಲ್ಲ. ಅರಸು ಅವರು ಈ ದೇಶ ಕಂಡ ಶ್ರೇಷ್ಠ ಮುಖ್ಯಮಂತ್ರಿ. ಅರಸು ಎನ್ನುವ ಹೆಸರೇ ಜನಪರವಾದ ಹೆಸರಾಗಿತ್ತು. ಇಂದಿಗೂ ಲಕ್ಷಾಂತರ ಜನರು ಅವರ ಸ್ಮರಣೆ ಮಾಡುತ್ತಿದ್ದಾರೆ. ಹಿಂದುಳಿದವರಲ್ಲಿ ಜಾಗೃತಿ ಮೂಡಿಸಿ ಹೊಸ ಇತಿಹಾಸ ಬರೆದರು. ಅವರ ಚಿಂತನೆಗಳನ್ನು, ಕಾರ್ಯ ಕ್ಷಮತೆಯನ್ನು, ಜನಹಿತವಾದ ಕಾಳಜಿಯನ್ನು ಇಡೀ ದೇಶವೇ ಕೊಂಡಾಡಿತು. ಅವರೊಬ್ಬ ಅಪರೂಪದ ಜನನಾಯಕ ಎಂದು ಬಣ್ಣಿಸಿದರು.
ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್, ಕಾಡಾ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಧುಕೇಶ್ವರ್, ವಕ್ಫೃ್ ಬೋರ್ಡ್ ಸದಸ್ಯ ಸೈಯದ್, ಮಿಲಿಟರಿ ಬಸವರಾಜ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ್ ಇತರರಿದ್ದರು.