ಭದ್ರಾವತಿ: ದಲಿತ, ಶೋಷಿತರ ಮುಖ್ಯಮಂತ್ರಿಗಳೆಂದೇ ಜನಮಾನಸದಲ್ಲಿ ಹಸಿರಾಗಿರುವ ಡಿ.ದೇವರಾಜ ಅರಸು ಅವರು ನಾಡಿಗೆ ಕೊಟ್ಟ ಕೊಡುಗೆ ಅಪಾರ ಎಂದು ನಗರಸಭೆ ಸದಸ್ಯ ಬಿ.ಕೆ.ಮೋಹನ್ ಹೇಳಿದರು.
ತಾಪಂ ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಡಿ. ದೇವರಾಜ ಅರಸು ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ, ರಾಜಕೀಯ ರಂಗದಲ್ಲಿ ಸಾಕಷ್ಟು ಚತುರರಾಗಿದ್ದ ಅರಸು ಅವರು ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದರು. ಹಿಂದುಳಿದವರ ಕಲ್ಯಾಣಕ್ಕಾಗಿ ಆಯೋಗವನ್ನು ರಚಿಸಿದರು. ಭೂಸುಧಾರಣೆ ನೀತಿಯನ್ನು ಜಾರಿಗೆ ತಂದು ಬಡವರ, ದೀನ ದಲಿತರ ಉದ್ಧಾರಕ್ಕಾಗಿ ಶ್ರಮಿಸಿದವರು ಎಂದರು.
ನಗರಸಭೆ ಮಾಜಿ ಉಪಾಧ್ಯಕ್ಷ ವೆಂಕಟೇಶ್ ಉಪನ್ಯಾಸ ನೀಡಿ, ಉಳುವವನೆ ಭೂ ಒಡೆಯ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ತಮ್ಮ 15 ಎಕರೆ ಜಮೀನನ್ನು ಕೆಲಸಗಾರನಿಗೆ ಬಿಟ್ಟು ಕೊಟ್ಟ ಮಹಾನ್ ವ್ಯಕ್ತಿ. ಅಂತಹ ಮಹಾನ್ ವ್ಯಕ್ತಿಯ ರಾಜಕೀಯದ ದೂರದೃಷ್ಟಿ ಇಂದಿನ ರಾಜಕಾರಣಿಗಳಿಗೆ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಹಾಸ್ಟೆಲ್ ವ್ಯವಸ್ಥೆ ಅವರ ಕೊಡುಗೆ ಎಂದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉಪ ತಹಸೀಲ್ದಾರ್ ರಂಗಮ್ಮ, ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳಾ ಬೈರಪ್ಪ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು, ಆನೆಕೊಪ್ಪ ಬಸವರಾಜ, ಮೀನಾಕ್ಷಮ್ಮ ಇದ್ದರು.