ಎಚ್.ಡಿ.ಕೋಟೆ: ಹಿಂದುಳಿದ ವರ್ಗಗಳ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮವನ್ನು ಆ.26ರಂದು ತಾಲೂಕಿನಲ್ಲಿ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.
ಪಟ್ಟಣದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ತಹಸಿಲ್ದಾರ್ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಡಿ.ದೇವರಾಜ ಅರಸು ಅವರು ತಮ್ಮ ಆಡಳಿತಾವಧಿಯಲ್ಲಿ ಹಿಂದುಳಿದ ವರ್ಗಗಳ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ ಜನನಾಯಕ. ಇಂದಿರಾಗಾಂಧಿ ಅವರು ದೇಶದ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಉಳುವವನೇ ಭೂ ಒಡೆಯ ಕಾನೂನನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದ ಅರಸು ಅವರು ಜಾರಿ ಮಾಡುವ ಮೂಲಕ ಬಡವರಿಗೆ ಭೂಮಿ ದೊರಕಲು ಅವಕಾಶ ಮಾಡಿಕೊಟ್ಟರು. ದೇಶಕ್ಕೆ ಸಂವಿಧಾನ ನೀಡಿ ಸರ್ವರಿಗೂ ಸಮಪಾಲು ನೀಡಿದ ಅಂಬೇಡ್ಕರ್ ಆಶಯದಂತೆ ಅವರ ಮಾರ್ಗದಲ್ಲಿ ಆಡಳಿತ ನಡೆಸಿದ ಅರಸು ಅವರು ಉತ್ತಮ ಆಡಳಿತ ನೀಡಿದ ಕೀರ್ತಿಗೆ ಪಾತ್ರರಾಗಿದ್ದರು. ಅವರ ಜನ್ಮದಿನವನ್ನು ತಾಲೂಕಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಬೇಕು ಎಂದು ಕೋರಿದರು.
ಕಾರ್ಯಕ್ರಮವನ್ನು ತಾಲೂಕು ಆಡಳಿತ ಸೌಧದ ಆವರಣದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅಧ್ಯಕ್ಷತೆಯಲ್ಲಿ ನಡೆಸಲಾಗುವುದು. ಅರಸು ಸಮುದಾಯದ ಮುಖಂಡರು ಹಾಗೂ ತಾಲೂಕಿನ ಪ್ರಗತಿಪರ ಸಂಘಟನೆಗಳು ಮುಖಂಡರು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.
ಹಿಂದುಳಿದ ವರ್ಗಗಳ ತಾಲೂಕು ಅಕಾರಿ ಶಶಿಕಲಾ, ಸರಗೂರು ತಾಪಂ ಇಒ ಪ್ರೇಮ್ ಕುಮಾರ್, ಪಶುವೈದ್ಯಾಧಿಕಾರಿಗಳಾದ ರಾಜಣ್ಣ, ಲಿಂಗರಾಜು, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರಾಮಸ್ವಾಮಿ, ಮುಖಂಡರಾದ ಬೆಳತ್ತೂರು ಮಹೇಶ್, ಆನಗಟ್ಟಿ ದೇವರಾಜು, ಪುಟ್ಟಮಾದು ಕೋಟೆ ಇದ್ದರು.