ಜಿಲ್ಲೆ

ಅರಸು ಸಾಧನೆ ಅವಿಸ್ಮರಣೀಯ: ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಂಗೇಗೌಡ ಬಣ್ಣನೆ

reportermys

ಮಂಡ್ಯ: ಡಿ.ದೇವರಾಜ ಅರಸು ಅವರ ಸಾಧನೆ ಅವಿಸ್ಮರಣೀಯ. ಉಳುವವನಿಗೆ ಭೂಮಿ, ಹಿಂದುಳಿದ ಸಮುದಾಯಗಳಿಗೆ ಅಧಿಕಾರ ಮತ್ತು ಸಂಪತ್ತನ್ನು ಸಮಾನವಾಗಿ ಹಂಚಿಕೆ ಮಾಡುವ ಮೂಲಕ ಕರ್ನಾಟಕದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದು ಮಾದರಿಯಾಗಿ ನಿಂತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಂಗೇಗೌಡ ಬಣ್ಣಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ವತಿಯಿಂದ ಸೋಮವಾರ ಆಯೋಜಿಸಿದ್ದ ಮೂರು ದಿನದ ಡಿ.ದೇವರಾಜ ಅರಸು 107ನೇ ಜನ್ಮ ದಿನಾಚರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮೇಲ್ವರ್ಗಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಳ ಸಮುದಾಯಗಳ ಶ್ರೇಯೋಭಿವೃದ್ಧಿಗೆ ದುಡಿದಂತಹ ಮೌನಕ್ರಾಂತಿಯ ಹರಿಕಾರ. ಅರಸು ಅವರು ಪರಿಶಿಷ್ಟರ ಜತೆಗೆ ಹಿಂದುಳಿದ ವರ್ಗಗಳ ಸಮುದಾಯದ ಬಲವರ್ಧನೆಗೆ ಮುಂದಾದರು. ಎಲ್.ಜೆ.ಹಾವನೂರು ವರದಿಯ ಮೂಲಕ ನೂರಾರು ಸಮುದಾಯಗಳಿಗೆ ದನಿಯಾದರು ಎಂದು ಗುಣಗಾನ ಮಾಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಮಾತನಾಡಿದರು. ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಉಪವಿಭಾಗಾಧಿಕಾರಿ ಆರ್.ಐಶ್ವರ್ಯಾ, ಹಿಂದುಳಿದ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀನಿವಾಸ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯ ಜಿಲ್ಲಾಧ್ಯಕ್ಷ ಎಲ್.ಸಂದೇಶ್, ಡಿ.ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ವಿ.ಆಂಜನಪ್ಪ ಸೇರಿದಂತೆ ಇತರರಿದ್ದರು.