ಜಿಲ್ಲೆ

ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಮಾಲಾಧಾರಿ ಸಾವು,    ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ಮೂವರು ಮೃತ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿನ ಸಾಯಿನಗರ ಅಚ್ಚವ್ವನ ಕಾಲನಿಯ ಈಶ್ವರ ದೇವಸ್ಥಾನ ಬಳಿ ಕಟ್ಟಡದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ಮೃತರ ಸಂಖ್ಯೆ ಮೂರಕ್ಕೇರಿದೆ.

ಇಲ್ಲಿಯ ವಿದ್ಯಾನಗರ ಕಟ್ಟಿಮನಿ ಶಾಲೆಯ ವಿದ್ಯಾರ್ಥಿ ಉಣಕಲ್ಲ ಸುಭಾನಿ ನಗರದ ರಾಜು ಹರ್ಲಾಪುರ (21) ಶುಕ್ರವಾರ ಬೆಳಗ್ಗೆ 8ಗಂಟೆ ಸುಮಾರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇನ್ನೊಬ್ಬ ಮಾಲಾಧಾರಿ ಗಾಯಾಳು ಲಿಂಗರಾಜ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹುಬ್ಬಳ್ಳಿಯ ಅಚ್ಚವ್ವನ ಕಾಲನಿಯ ಈಶ್ವರ ದೇವಸ್ಥಾನ ಬಳಿಯ ಕಟ್ಟಡದ ಮೇಲಂತಸ್ತಿನಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ತಂಗಿದ್ದರು. ಭಾನುವಾರ ರಾತ್ರಿ ಅಯ್ಯಪ್ಪಸ್ವಾಮಿಗೆ ಪೂಜೆ ಸಲ್ಲಿಸಿ ಸನ್ನಿಧಾನ ಬಳಿ ಮಲಗಿದ್ದಾಗ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಬಾಲಕ ಸೇರಿ 9 ಮಾಲಾಧಾರಿಗಳು ಸುಟ್ಟು ಗಾಯಗೊಂಡಿದ್ದರು.

ಕೆಎಂಸಿಆರ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರಲ್ಲಿ ಗುರುವಾರ ಬೆಳಗಿನ ಜಾವ ನಿಜಲಿಂಗಪ್ಪ ಬೇಪುರಿ ( 58 ವರ್ಷ) ಹಾಗೂ ಸಂಜಯ ಸವದತ್ತಿ (18) ಮೃತಪಟ್ಟಿದ್ದರು. ಶುಕ್ರವಾರ ರಾಜು ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾನೆ. ಈತನಿಗೆ ಶೇ. 74ರಷ್ಟು ಸುಟ್ಟು ಗಾಯಗಳಾಗಿದ್ದವು.

ಘಟನೆಯಲ್ಲಿ ಓರ್ವ ಬಾಲಕ ಗಾಯಗೊಂಡಿದ್ದು, ಆತನಿಗೆ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದುವರೆಗೆ ಈ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದಂತಾಗಿದೆ. ಇನ್ನುಳಿದ ಐವರ ಸ್ಥಿತಿಯು ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆ ಬಳಿ ಕುಟುಂಬದವರು ಆಕ್ರಂಧನ ಮುಗಿಲು ಮುಟ್ಟಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.