ಜಿಲ್ಲೆ

ಮೊಂತ ಸೈಕ್ಲೋನ್ ಹಿನ್ನೆಲೆ: ರಾಜ್ಯದಲ್ಲಿ 2 ದಿನ ಮಳೆ ಜೋರು

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ‘ಮೊಂತ’ ಚಂಡಮಾರುತ ಪರಿಣಾಮ ರಾಜ್ಯದ ಹಲವೆಡೆ ಅ.29ರವರೆಗೆ ಮಳೆಯಾಗಲಿದೆ. ಸೈಕ್ಲೋನ್‌ನಿಂದ ತಾಪಮಾನ ಕುಸಿತವಾಗಿ ಜನರಿಗೆ ಥಂಡಿ ಅನುಭವವಾಗುತ್ತಿದೆ.

ಮಂಗಳವಾರ ವೇಳೆಗೆ ಇನ್ನಷ್ಟು ಬಲಗೊಳ್ಳುವ ಸೈಕ್ಲೋನ್,ಆಂಧ್ರಪ್ರದೇಶದ ಕರಾವಳಿಯನ್ನು ದಾಟಲಿದೆ. ಈ ಅವಧಿಯಲ್ಲಿ ಗಂಟೆಗೆ 90-100 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದೆ. ಕರಾವಳಿ ಆಂಧ್ರಪ್ರದೇಶ, ಸೌರಾಷ್ಟ್ರ, ಕಚ್, ಒಡಿಶಾ ಮತ್ತು ಛತ್ತೀಸ್‌ಗಢದಲ್ಲಿ ಅ.29ರವರೆಗೆ ಧಾರಾಕಾರ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ಕೊಟ್ಟಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಉತ್ತರ ಕನ್ನಡದ ಹೊನ್ನಾವರ, ಕುಮಟಾ, ಕಾರವಾರ, ಮಂಕಿ, ಅಂಕೋಲಾ, ಹಾವೇರಿಯ ಗುತ್ತಲ್, ಯಾದಗಿರಿಯ ಶಹಪುರ, ಉಡುಪಿ ಕೋಟ, ಸಿದ್ದಾಪುರ, ದಕ್ಷಿಣ ಕನ್ನಡದ ಮಂಗಳೂರು ವಿಮಾನ ನಿಲ್ದಾಣ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಯಿತು.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮುಂದಿನ 2 ದಿನ ವ್ಯಾಪಕ ಮಳೆಯಾಗುವುದರಿಂದ ರಾಜ್ಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಅವಧಿಯಲ್ಲಿ 202 ಮಿಮೀ ವರೆಗೆ ಮಳೆಯಾಗುವ ಸಂಭವ ಇದೆ. ಸಮುದ್ರ ತೀರದಲ್ಲಿ ಬಿರುಗಾಳಿ ಬೀಸುವುದರಿಂದ ಮೀನುಗಾರಿಕೆ ನಡೆಸದಂತೆ ಮೀನುಗಾರರಿಗೆ, ಇಲಾಖೆ ಸೂಚಿಸಿದೆ.

ಬಾಗಲಕೋಟೆ, ಬೆಳಗಾವಿ, ಗದಗ, ಕೊಪ್ಪಳ, ರಾಯಚೂರು, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ ಮತ್ತು ಮೈಸೂರಿನಲ್ಲಿ ಅ.28 ಹಾಗೂ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ಅ. 29ರಂದು ಜೋರು ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಮುಂದಿನ 5 ದಿನ ಸಾಧಾರಣ ವರ್ಷಧಾರೆಯಾಗಲಿದೆ. ಬೆಂಗಳೂರು ನಗರದಲ್ಲಿ ಮುಂದಿನ 2 ದಿನ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಹಗುರವಾಗಿ ಮಳೆಯಾಗಲಿದೆ.