ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಶಾಲಾ ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ಬುಧವಾರ (ಡಿ.4) ರಜೆ ಘೋಷಣೆಯ ಜಿಲ್ಲಾಧಿಕಾರಿಗಳ ಆದೇಶದ ನಕಲಿ ಪತ್ರ ವೈರಲ್ ಆಗಿದ್ದು ಇದು ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ತಿಳಿದು ಬಂದಿದೆ.
ಫೆಂಗಾಲ್ ಚಂಡಮಾರುತದ ಪ್ರಭಾವದ ಹಿನ್ನೆಲೆಯಲ್ಲಿ ಬುಧವಾರ ಶಾಲಾ ಕಾಲೇಜುಗಳಿಗೆ, ಅಂಗನವಾಡಿಗಳಿಗೆ ರಜೆಯನ್ನು ಘೋಷಿಸಲಾಗಿದೆ. ಸದರಿ ರಜಾ ದಿನವನ್ನು ಮುಂದಿನ ರಜಾ ದಿನದಲ್ಲಿ ಸರಿದೂಗಿಸಲಾಗುತ್ತದೆ ಎಂಬುದಾಗಿ ಪತ್ರದಲ್ಲಿ ಮಾಹಿತಿ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪತ್ರದ ಹೆಸರಿನಲ್ಲಿದ್ದರಿಂದ ಪ್ರಾರಂಭದಲ್ಲಿ ರಜೆ ಘೋಷಣೆಯಾಗಿದೆ ಎಂದು ಭಾವಿಸಲಾಗಿತ್ತು. ಆದರೆ, ಸ್ವತಃ ಜಿಲ್ಲಾಧಿಕಾರಿ ಇದು ನಕಲಿ ಪತ್ರ ಎಂದು ಸ್ಪಷ್ಟನೆ ನೀಡಿದ್ದಾರೆ.
*ಬುಧವಾರ ರಜೆ ಇರಲ್ಲ*
ಎಂದಿನಂತೆ ಡಿ.4 ರಂದು ಶಾಲಾ ಕಾಲೇಜು, ಅಂಗನಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ. ರಜೆ ಇರುವುದಿಲ್ಲ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಾಗಬೇಕು ಎಂದು ಡಿಸಿ ತಿಳಿಸಿದ್ದಾರೆ.
*ಎರಡು ದಿನ ರಜೆ ನೀಡಲಾಗಿತ್ತು*
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ
ಸೋಮವಾರ ಮತ್ತು ಮಂಗಳವಾರ ರಜೆ ಘೋಷಿಸಲಾಗಿತ್ತು. ಇದರ ಆದೇಶದ ಪ್ರತಿಯಲ್ಲಿನ ದಿನಾಂಕವನ್ನು ಎಡಿಟ್ ಮಾಡಿ ನಕಲಿ ಪತ್ರ ಸೃಷ್ಟಿಸಲಾಗಿದೆ.