ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ "ರಿಮಾಲ್' ಚಂಡಮಾರುತ ಪರಿಣಾಮದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ 4 ದಿನ ಮಳೆ ಸುರಿಯಲಿದೆ.
ಭಾನುವಾರ ಬಾಗಲಕೋಟೆಯಲ್ಲಿ 6 ಮಿಮೀ ಮಳೆ ಬಿದ್ದಿದೆ. ಹಾವೇರಿಯ ಹನುಮಾನ್ಮಟ್ಟಿ, ಕೊಪ್ಪಳದ ಗಂಗಾವತಿ, ಶಿವಮೊಗ್ಗ ಆಗುಂಬೆ, ಯಾದಗಿರಿಯ ಕವಡಿಮಟ್ಟಿ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಸಾಧಾರಣ ವರ್ಷಧಾರೆಯಾಗಿದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಮೇ 27ರಿಂದ ಮೇ 29ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್ ಘೋಷಿಸಿದೆ. ಉತ್ತರ ಕನ್ನಡ, ಕಲಬುರಗಿ, ಧಾರವಾಡ, ಗದಗ, ಹಾವೇರಿ, ಬೆಂಗಳೂರು, ಬೆಂ.ಗ್ರಾಮಾಂತರ, ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗದಲ್ಲಿ ಮುಂದಿನ ಮೂರು ದಿನ ಗುಡುಗು ಮಿಂಚು ಸಹಿತ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಪೂರಕ ವಾತಾವರಣ:ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಿಂದ ಮೇ 19ರಂದು ನೈಋತ್ಯ ಮಾನ್ಸೂನ್ ಆರಂಭವಾಗಿದ್ದು, ಸದ್ಯ ಬಂಗಾಳಕೊಲ್ಲಿಯ ಮಧ್ಯ, ಈಶಾನ್ಯ ಭಾಗದಲ್ಲಿ ಮಾನ್ಸೂನ್ ಇನ್ನಷ್ಟು ವ್ಯಾಪಿಸಲು ಪೂರಕ ವಾತಾವರಣ ಇದೆ. ಮುಂದಿನ 4 ದಿನಗಳಲ್ಲಿ ಹಂತ ಹಂತವಾಗಿ ಕೇರಳಕ್ಕೆ ಸಮೀಪಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮಾಹಿತಿ ನೀಡಿದೆ.