ಜಿಲ್ಲೆ

ಮಾದಕ ದ್ರವ್ಯ ಜಾಗೃತಿಗಾಗಿ ಸೈಕಲ್‌ ರ‍್ಯಾಲಿ

ಮಂಗಳೂರು: ಮಂಗಳೂರು ಪೊಲೀಸ್ ವತಿಯಿಂದ ಅಪರಾಧ ತಡೆ ಸಪ್ತಾಹ ಹಾಗು ಮಾದಕ ದ್ರವ್ಯ ಸೇವನೆ ತಡೆ ಕುರಿತ ಜಾಗೃತಿ ಮೂಡಿಸುವ ಅಭಿಯಾನದ ಅಂಗವಾಗಿ ಭಾನುವಾರ ಸೈಕಲ್ ರ‌್ಯಾಲಿ ಏರ್ಪಡಿಸಲಾಯಿತು. ವಿಆರ್ ಸೈಕ್ಲಿಂಗ್ ಕ್ಲಬ್ ಸಹಯೋಗದಲ್ಲಿ ನಡೆದ ರ‌್ಯಾಲಿಯಲ್ಲಿ 4 ವರ್ಷದ ಪೋರನಿಂದ ತೊಡಗಿ 62ರ ವೃದ್ಧರು ಸೇರಿದಂತೆ 50ಕ್ಕೂ ಹೆಚ್ಚು ನಾಗರಿಕರು ಪಾಲ್ಗೊಂಡರು.
ನಗರದಲ್ಲಿ ಮಾದಕ ವ್ಯಸನವನ್ನು ದೂರವಾಗಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತಹ ಫಲಕಗಳನ್ನು ಪ್ರದರ್ಶಿಸಲಾಯಿತು. ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧಗಳ ಠಾಣೆ ಇನ್‌ಸ್ಪೆಕ್ಟರ್ ರಾಮಕೃಷ್ಣ ಕೆ.ಕೆ ರ‌್ಯಾಲಿಗೆ ಹಸಿರು ನಿಶಾನೆ ತೋರಿದರು. ಈ ವೇಳೆ ವಿಆರ್ ಸೈಕ್ಲಿಂಗ್‌ನ ಅಧ್ಯಕ್ಷ ಸರ್ವೇಶ ಸಾಮಗ, ಉಪಾಧ್ಯಕ್ಷ ಶ್ಯಾಮ್‌ಪ್ರಸಾದ್ ನಾಯಕ್ ಹಾಜರಿದ್ದರು.
ರಾಮಕೃಷ್ಣ ಮಾತನಾಡಿ, ಮಾದಕ ವ್ಯಸನ ಎನ್ನುವುದು ಸಾವಿನ ಬಲೆಯಾಗಿದ್ದು, ಇಂತಹ ಚಟದಿಂದ ಯುವಜನರು, ಮಕ್ಕಳು ಸೇರಿದಂತೆ ಎಲ್ಲರೂ ದೂರವಿರಬೇಕು, ಮಂಗಳೂರಿನಲ್ಲಿ ಇತ್ತೀಚೆಗೆ ಈ ವ್ಯಸನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರು ಜಾಗರೂಕರಾಗುವ ಮೂಲಕ ಅದನ್ನು ದೂರವಾಗಿಸಬೇಕು ಎಂದರು.
ಯಾವುದೇ ಅಭಿಯಾನದಲ್ಲಿ ಸಾರ್ವಜನಿಕರ ಸಹಯೋಗವಿದ್ದರೆ ಮಾತ್ರ ಅದು ಯಶಸ್ಸನ್ನು ಕಾಣಬಲ್ಲದು ಎಂದು ಬರ್ಕೆ ಇನ್‌ಸ್ಪೆಕ್ಟರ್ ಜ್ಯೋತಿಲಿಂಗ ಹೊನ್ನಕಟ್ಟೆ ಹೇಳಿದರು. ವಿಆರ್ ಸೈಕ್ಲಿಂಗ್‌ನ ಹಾರ್ನಿಶ್ ರಾಜ್ ಸಮಾರಂಭವನ್ನು ನಿರ್ವಹಿಸಿ ವಂದಿಸಿದರು.