ಬಂಗಾರಪೇಟೆ: ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಲು ಕರ್ನಾಟಕದಿಂದ ಹಲವಾರು ಭಕ್ತರು ತೆರಳುತ್ತಾರೆ. ಬೈಕ್, ಕಾರು, ಬಸ್, ರೈಲು ಹಾಗೂ ವಿವಾನಗಳ ಮೂಲಕ ಅಯೋಧ್ಯೆ ತಲುಪಿ ಶ್ರೀರಾಮನ ದರ್ಶನ ಪಡೆಯುತ್ತಾರೆ. ಆದರೆ ಬಂಗಾರಪೇಟೆ ತಾಲೂಕಿನ ಯುವಕರ ತಂಡವೊಂದು ಸೈಕಲ್ ಸವಾರಿ ಮೂಲಕ ಶ್ರೀರಾಮನನ್ನು ಕಾಣಲು ಮುಂದಾಗಿದ್ದಾರೆ.
1,900 ಕಿಲೋ ಮೀಟರ್‌ಗೂ ಅಧಿಕ ದೂರದ ಅಯೋಧ್ಯೆಯ ಶ್ರೀಬಾಲರಾಮನ ದರ್ಶನಕ್ಕಾಗಿ ಪಟ್ಟಣದ ವರದರಾಜ, ಗಗನ್, ರವಿ, ಹರೀಶ್ ಅವರು ಸೈಕಲ್ ಏರಿ ಅಯೊಧ್ಯೆ ಕಡೆಗೆ ಪ್ರಯಾಣ ಬೆಳಸಿ ಸೈಕಲ್ ಮೂಲಕ ಅಯೋಧ್ಯೆಯ ರಾಮನ ದರ್ಶನದ ಸಾಹಸಕ್ಕೆ ಕೈ ಹಾಕಿದ್ದಾರೆ.
ಸೈಕಲ್ ಸವಾರಿ ಮೂಲಕ ಅಯೋಧ್ಯೆಗೆ ತೆರಳುವ ಮುನ್ನ ಭಾನುವಾರ ಬೆಳಗ್ಗೆ ಬಜಾರ್ ರಸ್ತೆಯ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಯುವಕರ ತಂಡ ಈ ಸಂದರ್ಭದಲ್ಲಿ ನೆರೆದಿದ್ದ ಹಿತೈಷಿಗಳು, ಸ್ನೇಹಿತರು, ಬಂಧುಗಳು ಶುಭ ಹಾರೈಕೆಗಳೊಂದಿಗೆ ಅಯೋಧ್ಯೆಗೆ ಸೈಕಲ್ ಯಾತ್ರೆ ಆರಂಭಿಸಿದರು.
ಅಯೋಧ್ಯೆಗೆ ಬೈಕ್, ರೈಲು ಸೇರಿ ಬೇರೆ ಬೇರೆ ರೀತಿಯಲ್ಲಿ ಸಾಕಷ್ಟು ಭಕ್ತರು ಪ್ರಯಾಣಿಸುತ್ತಾರೆ. ಆದರೆ ನಮಗೆ ಸೈಕಲ್ ಮೂಲಕ ಅಯೋಧ್ಯೆಗೆ ಹೋಗಲು ಇಷ್ಟ. ಇದನ್ನು ನಿರ್ಧರಿಸಿ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸೈಕಲ್ ಮೂಲಕ ಅಯೋಧ್ಯೆಗೆ ಪ್ರಯಾಣ ಆರಂಭಿಸಿದ್ದೇವೆ ಎಂದು ಸಾಹಸಿ ಯುವಕರು ತಿಳಿಸಿದ್ದಾರೆ.
ಹಿರಿಯರಾದ ಕೃಷ್ಣಮೂರ್ತಿ ವಾತನಾಡಿ, ಬಂಗಾರಪೇಟೆ ಯುವಕರು ಹಲವು ಯುವಕರಿಗೆ ಪ್ರೇರಣೆಯಾಗಿದ್ದಾರೆ. ದೇಶದ ಸಂಸ್ಕೃತಿ ಎತ್ತಿ ಹಿಡಿಯಲು, ಯುವಶಕ್ತಿಯಲ್ಲಿ ರಾಮ ಭಕ್ತಿ ವೃದ್ಧಿಯಾಗಬೇಕೆಂಬ ಕಾರಣಕ್ಕೆ ಅಯೋಧ್ಯೆಗೆ ಸೈಕಲ್ ಯಾತ್ರೆ ಸಂಕಲ್ಪ ತೊಟ್ಟಿರುವುದು ಹೆಮ್ಮೆಯ ವಿಚಾರ ಎಂದರು