ಜಿಲ್ಲೆ

ಚುನಾವಣಾ ಆಯೋಗದಿಂದ ಮತದಾನ ಜಾಗೃತಿಗಾಗಿ ಸೈಕಲ್ ಜಾಥಾ

ಆರ್.ತುಳಸಿಕುಮಾರ್

ಬೆಂಗಳೂರು: ಲೋಕಸಭಾ ಚುನಾವಣೆಯ ಅಂಗವಾಗಿ ಚುನಾವಣಾ ಆಯೋಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಯೂನಿಯನ್ ಬ್ಯಾಂಕ್ ಸಹಯೋಗದಲ್ಲಿ ನಡೆದ ಸೈಕಲ್ ಜಾಥಾಗೆ (ಸೈಕ್ಲೋಥಾನ್) ಗುರುವಾರ ಭಾರೀ ಜನಸ್ಪಂದನೆ ವ್ಯಕ್ತವಾಯಿತು.

ವಿಧಾನಸೌಧದ ಮುಂಭಾಗ ಗುರುವಾರ ಆಯೋಜಿಸಿದ್ದ ಮತದಾನ ಜಾಗೃತಿಯ ಸೈಕಲ್ ಜಾಥಾಗೆ (ಸೈಕ್ಲೋಥಾನ್) ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚಾಲನೆ ನೀಡಿದರು. ಸೈಕಲ್ ಜಾಥಾಗೆ ಚುನಾವಣಾ ರಾಯಭಾರಿಗಳು ಕೂಡ ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ಅವರು, ಈ ತಿಂಗಳ 26 ರಂದು ನಡೆಯುವ ಮತದಾನದ ಹಬ್ಬವನ್ನು ಎಲ್ಲರೂ ಸೇರಿ ಒಟ್ಟಾಗಿ ಆಚರಿಸೋಣ. ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಹಾಗೂ ಜಾಥಾಗಳನ್ನು ಹಮ್ಮಿಕೊಳ್ಳುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸೈಕ್ಲಥಾನ್ ಸಾಗಿದ ಹಾದಿ:

ಸೈಕಲ್ ಜಾಥಾ ವಿಧಾನಸೌಧದ ಮುಂಭಾಗದಿಂದ ಆರಂಭಗೊಂಡು ಕೆ.ಆರ್.ವೃತ್ತ, ನೃಪತುಂಗ ರಸ್ತೆಯ ಮೂಲಕ ಸಾಗಿ, ಹಡ್ಸನ್ಸ್ ವೃತ್ತ, ಕಸ್ತೂರ್ ಬಾ ರಸ್ತೆ, ಕ್ವೀನ್ಸ್ ರಸ್ತೆಯಿಂದ (ಚಿನ್ನಸ್ವಾಮಿ ಕ್ರೀಡಾಂಗಣ), ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯ ಮೂಲಕ ವಿಧಾನಸೌಧ ಪೂರ್ವ ದ್ವಾರದ ಬಳಿ ಮುಕ್ತಾಯಗೊಂಡಿತು.

ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎಸ್. ಕಾಂತರಾಜು, ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ಚುನಾವಣಾ ರಾಯಭಾರಿಗಳಾದ ಅನೂಪ್ ಶ್ರೀಧರ್, ನೀತು ವನಜಾಕ್ಷಿ, ಸೈಕ್ಲಿಸ್ಟ್‌ಗಳಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ನಾಗರಿಕರು ಸೇರಿ ಇನ್ನಿತರರು ಉಪಸ್ಥಿತರಿದ್ದರು.