ಜಿಲ್ಲೆ

ಜನಧನ್ ಖಾತೆಗೂ ಸೈಬರ್ ಕಳ್ಳರ ಕಾಟ: ಬ್ಯಾಂಕ್, ಕೇಂದ್ರ ಅಧಿಕಾರಿಗಳ ಸೋಗಿನಲ್ಲಿ ಕರೆ- ಪಿಂಚಣಿ, ಕಿಸಾನ್ ಸಮ್ಮಾನ್ ಹಣ ಜಮೆ ನೆಪ

kumarvrl

ಬೆಂಗಳೂರು: ಕರೊನಾ ಲಾಕ್​ಡೌನ್​ನಲ್ಲಿ ಸಿಲುಕಿರುವ ಬಡವರು, ರೈತರ ‘ಜನಧನ್ ಖಾತೆ’ಗೂ ಸೈಬರ್ ಕಳ್ಳರು ಕನ್ನ ಹಾಕುತ್ತಿದ್ದು, ಖಾತೆದಾರರು ಮತ್ತು ಪಿಂಚಣಿದಾರರು ಕಂಗಾಲಾಗಿದ್ದಾರೆ.

ಕರೊನಾ ಸೋಂಕಿನ ಕರ್ಫ್ಯೂನಲ್ಲಿ ದೇಶವೇ ಬಂಧಿಯಾಗಿದೆ. ಕಷ್ಟದಲ್ಲಿ ಸಿಲುಕಿರುವ ಬಡವರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಲುವಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಜನಧನ್ ಯೋಜನಾ ಅಡಿ ಎಲ್ಲ ಖಾತೆದಾರರ ತಲಾ 500 ರೂ., ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ 2 ಸಾವಿರ ರೂ. ಹಾಗೂ ವೃದ್ಧಾಪ್ಯವೇತನ 1 ಸಾವಿರ ರೂ. ಜಮೆ ಮಾಡುತ್ತಿದೆ.

ಈಗಾಗಲೇ ಏಪ್ರಿಲ್ 1ಕ್ಕೆ ಬಹುತೇಕ ಜನಧನ್ ಖಾತೆಗೆ ಹಣ ಜಮೆ ಆಗಿದೆ. ಇದನ್ನೇ ದುರುಪಯೋಗ ಮಾಡಿ ಕೊಳ್ಳುತ್ತಿರುವ ಸೈಬರ್ ಕಳ್ಳರು, ಅಮಾಯಕ ಜನಧನ್ ಖಾತೆದಾರರ ಮೊಬೈಲ್​ಗೆ ಬ್ಯಾಂಕ್ ಅಧಿಕಾರಿ ಅಥವಾ ಕೇಂದ್ರ ಸರ್ಕಾರದ ಅಧಿಕಾರಿ ಸೋಗಿನಲ್ಲಿ ಕರೆ ಮಾಡುತ್ತಿದ್ದಾರೆ. ಕರೆ ಸ್ವೀಕರಿಸುವರ ಬಳಿ ಮೊದಲು ಜನಧನ್ ಖಾತೆ ಮಾಡಿಸಿದ್ದೀರಾ ಪ್ರಶ್ನಿಸುತ್ತಾರೆ. ‘ಹೌದು..’ ಎಂದರೆ, ‘ಪ್ರಧಾನಮಂತ್ರಿ ಜನಧನ್ ಯೋಜನೆ ಮತ್ತು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್’ ಅಡಿ ಹಣ ಜಮೆ ಮಾಡುತ್ತೇವೆ. ಖಾತೆ ವಿವರ ಕೊಡಿ’ ಎಂದು ಹೇಳಿ ಅವರಿಂದ ಬ್ಯಾಂಕ್ ಖಾತೆ, ಸಿವಿವಿ ನಂಬರ್ ಪಡೆಯುತ್ತಾರೆ. ನಂತರ ನಿಮ್ಮದೇ ಖಾತೆ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಮೊಬೈಲ್​ಗೆ ಬರುವ ಸಂದೇಶದಲ್ಲಿ 6 ಸಂಖ್ಯೆ(ಒಟಿಪಿ) ಬರಲಿದೆ. ಅದನ್ನು ಹೇಳಿ ಎಂದು ಪಡೆದು ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ.

ಜನಧನ್ ಖಾತೆ ಇಲ್ಲವೆಂದರೆ ಅಂತಹವರಿಗೆ ‘ಜನಧನ್ ಖಾತೆ’ಗೆ ಬದಲಾಯಿಸುತ್ತೇವೆ ಎಂದು ಹೇಳಿ. ಪ್ರಸ್ತುತ ಇರುವ ಬ್ಯಾಂಕ್ ಖಾತೆ ವಿವರ ಪಡೆದು ಅದರಲ್ಲಿನ ಹಣವನ್ನು ಹಂತ ಹಂತವಾಗಿ ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ.

ಇದೆ ರೀತಿ ವೃದ್ಧಾಪ್ಯ ವೇತನಕ್ಕೂ ಕನ್ನ ಹಾಕುತ್ತಿದ್ದಾರೆ. ಇತ್ತೀಚೆಗೆ ಅಂಚೆ ಇಲಾಖೆಯಲ್ಲಿ ಪ್ರತಿಯೊಬ್ಬ ವೃದ್ಧರಿಗೆ ಹೊಸದಾಗಿ ಬ್ಯಾಂಕ್ ಖಾತೆ ತೆರೆದು ಮೊಬೈಲ್ ನಂಬರ್ ಲಿಂಕ್ ಮಾಡಿ ಎಟಿಎಂ ಕಾರ್ಡ್ ಸಹ ವಿತರಣೆ ಮಾಡಿದ್ದಾರೆ. ಈ ಖಾತೆದಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೇರವಾಗಿ ಪಿಂಚಣಿ ಹಣವನ್ನು ಜಮೆ ಮಾಡುತ್ತಿವೆ. ಇದರ ಮೇಲೂ ಕಣ್ಣಿಟ್ಟಿರುವ ಸೈಬರ್ ಕಳ್ಳರು, ಮೊಬೈಲ್ ನಂಬರ್ ಕರೆ ಮಾಡಿ ತಮ್ಮ ಮೋಸದ ಜಾಲಕ್ಕೆ ಎಳೆದು ಖಾತೆಗೆ ಕನ್ನ ಹಾಕುತ್ತಿದ್ದಾರೆ.

ಈ ವಂಚನೆ ಜಾಲದಲ್ಲಿ ಬಡವರು, ರೈತರು, ವೃದ್ಧರು ಸಿಲುಕುತ್ತಿದ್ದಾರೆ. ಬ್ಯಾಂಕ್ ಅಧಿಕಾರಿ ಮತ್ತು ಸರ್ಕಾರದಿಂದ ಮಾತನಾಡುತ್ತಿದ್ದಾರೆ ಎಂದು ತಮ್ಮ ಬಳಿ ಇರುವ ಎಲ್ಲ ಮಾಹಿತಿಯನ್ನು ಕೊಟ್ಟು ಮೋಸಕ್ಕೆ ಗುರಿಯಾಗುತ್ತಿದ್ದಾರೆ ಎಂದು ಸೈಬರ್ ಕ್ರೖೆಂ ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ಖಾತೆಯಲ್ಲಿದ್ದ 47 ಸಾವಿರ ರೂ.ಗೆ ಕನ್ನ

ನಾಗರಬಾವಿಯ ಮೂಡಲಪಾಳ್ಯ ನಿವಾಸಿ ದಿವ್ಯಾ ಎಂಬಾಕೆಗೆ ಏ.8ರ ಮಧ್ಯಾಹ್ನ 4 ಗಂಟೆಗೆ ಮೊಬೈಲ್​ಗೆ ಕರೆ ಮಾಡಿದ ವಂಚಕ ಖಾಸಗಿ ಬ್ಯಾಂಕ್ ವ್ಯವಸ್ಥಾಪಕ ಎಂದು ಹೇಳಿದ್ದಾನೆ. ನಿಮ್ಮ ಖಾತೆಗೆ ಪ್ರಧಾನಿ ಮೋದಿಯಿಂದ ಹಣ ಬಂದಿದೆ. ವರ್ಗಾವಣೆ ಮಾಡುತ್ತಿದ್ದೇನೆ. ನಿಮ್ಮ ಬ್ಯಾಂಕ್ ವಿವರ ಮತ್ತು ನಿಮಗೆ ಬರುವ ಒಟಿಪಿ ನಂಬರ್ ಹೇಳುವಂತೆ ಸೂಚಿಸಿದ್ದಾನೆ. ಮಹಿಳೆ ತನಗೆ ಬಂದ ಒಟಿಪಿಯನ್ನು ಹೇಳಿದಾಗ ಸೈಬರ್ ಕಳ್ಳ, ದಿವ್ಯಾ ಬ್ಯಾಂಕಿನಲ್ಲಿದ್ದ 47 ಸಾವಿರ ರೂ. ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಪಶ್ಚಿಮ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

38.08 ಕೋಟಿ ಜನಧನ್ ಖಾತೆ

ದೇಶದ ರೈತರು, ಕಾರ್ವಿುಕ ಸೇರಿ ಬಡವರಿಗೆ ನೇರವಾಗಿ ಸಬ್ಸಿಡಿ ಹಣ ಜಮೆ ಮಾಡುವ ಉದ್ದೇಶಕ್ಕೆ ಪ್ರಧಾನಮಂತ್ರಿ ಜನಧನ್ ಯೋಜನೆ ಆರಂಭಿಸಲಾಗಿದೆ. ಇಲ್ಲಿಯವರೆಗೂ 38.08 ಕೋಟಿ ಜನರು ಖಾತೆ ತೆರೆದಿದ್ದು, ಈ ಪೈಕಿ 20.60 ಕೋಟಿ ಮಹಿಳಾ ಖಾತೆದಾರರು ಇದ್ದಾರೆ. ಕರೊನಾ ಕರ್ಫ್ಯೂ ವೇಳೆ ಕೇಂದ್ರ ಸರ್ಕಾರ ಏಪ್ರಿಲ್​ನಲ್ಲಿ 1.19 ಲಕ್ಷ ಕೋಟಿ ರೂ. ಜಮೆ ಮಾಡಿದೆ.

ಗೋವಿಂದರಾಜು ಚಿನ್ನಕುರ್ಚಿ