ಮಂಗಳೂರು: ಅಪರಿಚಿತ ಸೈಬರ್ ವಂಚಕರು 5ಜಿ ಸಿಮ್ ಅಪ್‌ಡೇಟ್ ಮಾಡುವುದಾಗಿ ನಂಬಿಸಿ 43 ವರ್ಷದ ವ್ಯಕ್ತಿಯೊಬ್ಬರಿಗೆ ಒಟ್ಟು 23,98,138 ರೂ. ಬ್ಯಾಂಕ್ ಖಾತೆ ಹಾಗೂ ವಿವಿಧ ಕ್ರೆಡಿಟ್ ಕಾರ್ಡ್‌ಗಳ ಮೂಲಕ ವಂಚಿಸಿದ್ದಾರೆ.
ಜು.8ರಂದು ಕರೆ ಮಾಡಿದ ವ್ಯಕ್ತಿಯು ತಾನು ಏರ್‌ಟೆಲ್ ಕಸ್ಟಮರ್ ಕೇರ್ ಅಧಿಕಾರಿಯೆಂದು ಪರಿಚಯಿಸಿಕೊಂಡು, ಸದ್ಯ ಬಳಕೆಯಲ್ಲಿರುವ 4ಜಿ ಸಿಮ್ ಅನ್ನು 5ಜಿಗೆ ನವೀಕರಿಸಬೇಕೆಂದು ತಿಳಿಸಿದ್ದಾನೆ. ಬಳಿಕ ಜಿ ಮೇಲ್‌ಗೆ ಬರುವ ಸಂದೇಶಕ್ಕೆ ಎಸ್ ಎಂದು ಪ್ರತಿಕ್ರಿಯಿಸಲು ಸೂಚಿಸಿದ್ದು, ನವೀಕರಣದ ಕಾರಣ ಕೆಲವು ಗಂಟೆಗಳ ಕಾಲ ಮೊಬೈಲ್ ನೆಟ್‌ವರ್ಕ್ ಕಾರ್ಯನಿರ್ವಹಿಸುವುದಿಲ್ಲ ಎಂದು ನಂಬಿಸಿದ್ದಾನೆ.
ಆತನ ಸೂಚನೆಯಂತೆ ಸಂದೇಶಕ್ಕೆ ಒಪ್ಪಿಗೆ ನೀಡಿದ ಬಳಿಕ ಮೊಬೈಲ್ ಸಿಮ್ ಕಾರ್ಯನಿರ್ವಹಿಸದೆ ಹೋಗಿದೆ. ಅನುಮಾನಗೊಂಡ ಸಂತ್ರಸ್ತರು ಸ್ಥಳೀಯ ಏರ್‌ಟೆಲ್ ಕಚೇರಿಗೆ ತೆರಳಿ ವಿಚಾರಿಸಿದಾಗ, ಈ ರೀತಿಯಲ್ಲಿ ಕರೆ ಮಾಡಿ ಸಿಮ್ ನವೀಕರಿಸುವ ಯಾವುದೇ ವ್ಯವಸ್ಥೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಂತರ ಜು.10ರಂದು ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ, ಜು.8ರಿಂದ 9ರ ಅವಧಿಯಲ್ಲಿ ಬ್ಯಾಂಕ್ ಖಾತೆಗಳಿಂದ 2.89 ಲಕ್ಷ ರೂ. ಹಾಗೂ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ 9 ಲಕ್ಷ ರೂ. ಸಾಲ ಪಡೆದು ಅದನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಮತ್ತೊಂದು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ 4,06,138 ರೂ., ಐಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ 3,03,000 ರೂ. ಹಾಗೂ ಆರ್‌ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ 5,00,000 ರೂ. ಹಣವನ್ನು ವಂಚಕರು ಅಕ್ರಮವಾಗಿ ವರ್ಗಾಯಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.