ಬೆಂಗಳೂರು: ಹಳೇ ಹಾಸಿಗೆಗಳನ್ನು ಆನ್‌ಲೈನ್ ಮಾರ್ಕೆಟ್‌ನಲ್ಲಿ ಮಾರಾಟಕ್ಕೆ ಮುಂದಾಗಿದ್ದ ಯುವತಿಯರ ಬ್ಯಾಂಕ್ ಖಾತೆಯಿಂದ, ಸೈಬರ್ ವಂಚಕರು 1 ಲಕ್ಷ ರೂ. ಲಪಟಾಯಿಸಿದ್ದಾರೆ. ಕಸವನಹಳ್ಳಿ ನಿವಾಸಿ ತೇಜಸ್ವಿ ಸಿಂಗ್ ಮತ್ತು ಸಪ್ನಾ ವಂಚನೆಗೊಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಕನ್ಹಯ್ಯ ಕುಮಾರ್ ಮತ್ತು ಉದಯ್‌ಭಾನ್ ಸಿಂಗ್ ಎಂಬುವರ ವಿರುದ್ಧ ವೈಟ್‌ಫೀಲ್ಡ್ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ತೇಜಸ್ವಿ ಸಿಂಗ್ ಹಾಗೂ ಸಪ್ನಾ ಅವರು ಹಳೇ ಹಾಸಿಗೆಗಳನ್ನು ಮಾರಾಟ ಮಾಡಲು ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಇದನ್ನು ಗಮನಿಸಿ ಕರೆ ಮಾಡಿದ್ದ ಅಪರಿಚಿತರು, ಹಾಸಿಗೆಗಳನ್ನು ಖರೀದಿಸುತ್ತೇವೆ. ಆನ್‌ಲೈನ್ ಮೂಲಕ ಹಣ ಸಂದಾಯ ಮಾಡುವುದಾಗಿ ಹೇಳಿ, ಮೊಬೈಲ್‌ಗೆ ಕ್ಯೂಆರ್ ಕೋಡ್ ಕಳುಹಿಸಿದ್ದರು.
ಅದನ್ನು ಸ್ಕಾೃನ್ ಮಾಡಿದ ತೇಜಸ್ವಿ ಸಿಂಗ್ ಅವರ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ 46,900 ರೂ. ಬೇರೆ ಖಾತೆಗೆ ವರ್ಗಾವಣೆಯಾಗಿದೆ. ಇದೇ ರೀತಿ ಸಪ್ನಾ ಅವರ ಬ್ಯಾಂಕ್ ಖಾತೆಯಿಂದಲೂ 60 ಸಾವಿರ ರೂ. ಕಡಿತವಾಗಿದೆ. ಈ ಬಗ್ಗೆ ವಿಚಾರಿಸಲು ಕರೆ ಮಾಡಿದಾಗ, ಸಂಪರ್ಕಕ್ಕೆ ಸಿಕ್ಕಿಲ್ಲ. ಸೈಬರ್ ವಂಚನೆ ಎಂಬುದು ಗೊತ್ತಾಗಿ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.