ಹರೀಶ್ ಮೋಟುಕಾನ ಮಂಗಳೂರು
ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿ ಸಹಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸೈಬರ್ ಅಪರಾಧ ಪ್ರಕರಣ ಲಾಕ್‌ಡೌನ್ ಬಳಿಕ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ದಿನವೊಂದಕ್ಕೆ ಕನಿಷ್ಠ ನಾಲ್ಕೈದು ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿರುವುದು ಇದಕ್ಕೆ ನಿದರ್ಶನ.
ಉತ್ತರ ಭಾರತ, ವಿದೇಶಗಳಲ್ಲಿ ಕುಳಿತುಕೊಂಡೇ ಈ ಅಕ್ರಮ ಎಸಗಲಾಗುತ್ತಿದೆ. ಸೈಬರ್ ಠಾಣೆಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಜಾಡು ಹಿಡಿದು ತನಿಖೆ ನಡೆಸಿದರೂ ಮೂಲ ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.
ಖಾತೆಯಿಂದ ಹಣ ಡ್ರಾ: ಲಾಕ್‌ಡೌನ್ ಬಳಿಕ ಏಳು ತಿಂಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 200ಕ್ಕಿಂತಲೂ ಅಧಿಕ, ಉಡುಪಿ ಜಿಲ್ಲೆಯಲ್ಲಿ 100ಕ್ಕಿಂತಲೂ ಅಧಿಕ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಪತ್ತೆಯಾಗಿರುವುದು ಬೆರಳೆಣಿಕೆಯಷ್ಟು ಮಾತ್ರ. ಮಂಗಳೂರು ನಗರದಲ್ಲಿ ಖಾತೆಯಿಂದ ಖಾತೆದಾರರಿಗೆ ತಿಳಿಯದಂತೆ ಎಟಿಎಂ ಮೂಲಕ ಹಣ ಡ್ರಾ ಮಾಡುವ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ದಿನಕ್ಕೆ ಕನಿಷ್ಠ ಮೂರು ಪ್ರಕರಣ ದಾಖಲಾಗುತ್ತಿದೆ.
ಸೈಬರ್ ವಂಚನೆ ಹಲವು ವಿಧ: ವ್ಯಕ್ತಿಯ ಬ್ಯಾಂಕಿಂಗ್ ವಿವರ ಪಡೆದು ಖಾತೆಯಿಂದ ಹಣ ಪಡೆಯುವುದು ಆರ್ಥಿಕ ಐಡೆಂಟಿಟಿ ಕಳವು. ಈ ರೀತಿ ಕಳವು ಮಾಡಿದ ಹಣವನ್ನು ನಗದೀಕರಿಸಿಕೊಳ್ಳುವುದಿಲ್ಲ. ಸರಕು ಹಾಗೂ ಸೇವೆಗಳನ್ನು ಆನ್‌ಲೈನ್ ಮೂಲಕ ಪಡೆಯುತ್ತಾರೆ. ಆನ್‌ಲೈನ್ ಐಡೆಂಟಿಟಿ ಬಳಸಿ ಅಪರಾಧ ಕೃತ್ಯ ಎಸಗುವುದನ್ನು ಐಡೆಂಟಿಟಿ ದುರ್ಬಳಕೆ ಎನ್ನಲಾಗುತ್ತದೆ. ಇಂತಹ ಕೃತ್ಯಗಳಲ್ಲಿ ಆರೋಪಿ ಎಸಗಿದ ತಪ್ಪಿಗೆ ನೈಜ ವ್ಯಕ್ತಿ (ಹಣ ಕಳೆದುಕೊಂಡವನು) ತನಿಖೆ ಎದುರಿಸಬೇಕಾಗುತ್ತದೆ. ಮಾದಕ ವಸ್ತು ಕಳ್ಳ ಸಾಗಣೆ, ಆನ್‌ಲೈನ್ ವಂಚನೆ ಹಾಗೂ ಡಾರ್ಕ್‌ವೆಬ್ ವಹಿವಾಟುಗಳಿಗೆ ಇಂತಹ ಗುರುತುಗಳನ್ನು ಬಳಸಿಕೊಳ್ಳಲಾಗುತ್ತದೆ.
ಒಬ್ಬ ವ್ಯಕ್ತಿಯ ಪ್ರೊಫೈಲನ್ನು ಬೇರೊಬ್ಬ ವ್ಯಕ್ತಿ ನಕಲು ಮಾಡುವುದು ಆನ್‌ಲೈನ್ ಕ್ಲೋನಿಂಗ್. ಮಾಹಿತಿ ಕದ್ದಿರುವ ವ್ಯಕ್ತಿಯು ಜನರೆದುರು ತಾನೇ ನೈಜ ವ್ಯಕ್ತಿ ಎಂದು ಬಿಂಬಿಸಿ, ಅವರಿಂದ ಹಣ ಪಡೆದು ವಂಚಿಸುತ್ತಾನೆ.
ವಾಣಿಜ್ಯ ಸಂಸ್ಥೆಯೊಂದರ ಪ್ರೊಫೈಲ್ ಬಳಸಿಕೊಂಡು ನಡೆಸುವ ವ್ಯವಹಾರ, ವಾಣಿಜ್ಯ ಚಟುವಟಿಕೆಗಳನ್ನು ವಾಣಿಜ್ಯ ಐಡೆಂಟಿಟಿ ಎಂದು ಕರೆಯಲಾಗುತ್ತದೆ.
ಎಲ್ಲಿ ಎಚ್ಚರ ವಹಿಸಬೇಕು?
ನಿಮ್ಮ ಎಟಿಎಂ ಅವಧಿ ಮುಗಿದಿದೆ. ರಿನೀವಲ್ ಮಾಡಿ ಕೊಡುತ್ತೇವೆ ಎಂದು ಬ್ಯಾಂಕ್ ಸಿಬಂದಿ ಹೆಸರಿನಲ್ಲಿ ಕರೆ. * ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತೇವೆ ಎಂದು ದಾಖಲೆಗೆ ಬೇಡಿಕೆ. * ಎಟಿಎಂಗೆ ಪಾನ್ ನಂಬರ್/ ಆಧಾರ್ ಸಂಖ್ಯೆ ಲಿಂಕ್ ಮಾಡುತ್ತೇವೆ ಎಂದು ಫೋನ್. * ನಿಮ್ಮ ಎಟಿಎಂ ಕಾರ್ಡ್‌ಗೆ ರಿವಾರ್ಡ್ ಬಂದಿದೆ ಎಂದು ಕರೆ/ ಸಂದೇಶ. * ಮೊಬೈಲ್‌ಗೆ ಎಸ್‌ಎಂಎಸ್, ವಾಟ್ಸಪ್ ಮೆಸೇಜ್‌ಗಳ ಮೂಲಕ ಲಿಂಕ್. * ಕೌನ್ ಬನೇಗಾ ಕರೋಡ್‌ಪತಿ, ಕೋಟ್ಯಧಿಪತಿ, ಭಾರಿ ಮೊತ್ತದ ಲಾಟರಿಗಳ ಮೆಸೇಜ್, ಇಮೇಲ್, ಮಾಧ್ಯಮಗಳಲ್ಲಿ ಜಾಹೀರಾತು. * ಫೇಸ್‌ಬುಕ್, ಇನ್‌ಸ್ಟ್ರಾಗ್ರಾಂನಲ್ಲಿ ಅಪರಿಚಿತರ ಜತೆ ಗೆಳೆತನ. * ಅಶ್ಲೀಲ ವೆಬ್‌ಸೈಟ್‌ಗಳಿಗೆ ಭೇಟಿ. * ಹಣ ವರ್ಗಾವಣೆ ಆ್ಯಪ್‌ಗಳು. * ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್‌ಗಳನ್ನು ಗೊತ್ತಿಲ್ಲದಂತೆ ಬದಲಿಸಿ ಮೋಸ ಮಾಡುವವರು.
ಸಾರ್ವಜನಿಕರು ಎಟಿಎಂ, ಪಾಸ್‌ವರ್ಡ್, ಬ್ಯಾಂಕ್ ದಾಖಲೆಗಳನ್ನು ಇನ್ನೊಬ್ಬರೊಂದಿಗೆ ಯಾವುದೇ ಕಾರಣಕ್ಕೂ ಶೇರ್ ಮಾಡಬೇಡಿ. ಆನ್‌ಲೈನ್ ಮೂಲಕ ವ್ಯವಹಾರ ಮಾಡುವಾಗ ಎಚ್ಚರಿಕೆ ವಹಿಸಬೇಕು. ದೇಶದ ಯಾವುದೋ ಮೂಲೆಯಲ್ಲಿ ಅಥವಾ ವಿದೇಶಗಳಲ್ಲಿ ಕುಳಿತುಕೊಂಡು ವಂಚನೆ ಮಾಡುವವರ ಪತ್ತೆ ಮಾಡುವುದು ಅಷ್ಟೊಂದು ಸುಲಭವಲ್ಲ. ಜಾಗೃತರಾಗುವುದರಿಂದ ಇಂತಹ ಅಪರಾಧ ತಡೆಯಲು ಸಾಧ್ಯ. ಪೊಲೀಸ್ ಇಲಾಖೆಯಿಂದ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುವುದು.
- ಎನ್.ಶಶಿಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತರು