ಜಿಲ್ಲೆ

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸೈಬರ್ ಅಪರಾಧ ಪ್ರಕರಣ

ಆರ್.ಕೃಷ್ಣ, ಮೈಸೂರು

ಆನ್‌ಲೈನ್ ವಹಿವಾಟು ಹೆಚ್ಚಾಗುತ್ತಿರುವಂತೆ ಸೈಬರ್ ಅಪರಾಧ ಪ್ರಕರಣಗಳೂ ಹೆಚ್ಚಾಗುತ್ತಿದ್ದು, ಇಂತಹ ಪ್ರಕರಣಗಳನ್ನು ಭೇದಿಸು ವುದು ಈಗ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಯಾವುದೋ ಸ್ಥಳದಲ್ಲಿ ಕುಳಿತು ರಾಜ್ಯ, ದೇಶ, ವಿದೇಶದಲ್ಲಿ ಇರುವಂತೆ ಆನ್‌ಲೈನ್ ವಹಿವಾಟು ನಡೆಸಿ ವಂಚನೆ ಮಾಡುವ ಜಾಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಪ್ರಕರಣಗಳನ್ನು ಬೆನ್ನತ್ತಿದರೂ ಅಪರಾಧಿಗಳು ಎಲ್ಲಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚುವುದೇ ಪೊಲೀಸರಿಗೆ ತಲೆನೋವಾಗಿದೆ.

ಒಂದೊಮ್ಮೆ ಆರೋಪಿಗಳು ಸಿಕ್ಕರೂ, ಸೂಕ್ತ ದಾಖಲೆ, ಆತನೇ ಕೃತ್ಯವೆಸಗಿದ್ದಾನೆ ಎನ್ನುವುದಕ್ಕೆ ಪುರಾವೆ ಒದಗಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಆರೋಪಿಗಳು ಸಿಕ್ಕಿ ಬಿದ್ದರೂ ಶಿಕ್ಷೆ ಕೊಡಿಸುವ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಎಲ್ಲೆಡೆ ಪ್ರಚಾರ ಮಾಡುವುದರೊಂದಿಗೆ ಅಪರಾಧ ಮಾಸಾಚರಣೆ ಅಂಗವಾಗಿ ಮೊಬೈಲ್ ರಿಂಗ್ ಟೋನ್‌ನಲ್ಲಿಯೂ ಸೈಬರ್ ಅಪರಾಧಗಳ ಕುರಿತು ಜಾಗೃತಿ ಸಂದೇಶ ಹಾಕಲಾಗುತ್ತಿದೆ. ಆಮೂಲಕ ಸೈಬರ್ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ಸೈಬರ್ ಠಾಣೆ ಸ್ಥಾಪನೆ:

ಸೈಬರ್ ಅಪರಾಧ ನಿಯಂತ್ರಣ ಮತ್ತು ಪತ್ತೆಗೆ ಪ್ರತಿ ಜಿಲ್ಲೆಯಲ್ಲಿಯೂ ಪ್ರತ್ಯೇಕ ಸೈಬರ್ ಪೊಲೀಸ್ ಠಾಣೆ ಸ್ಥಾಪಿಸಿ ವಿಶೇಷ ಪರಿಣಿತಿ ಹೊಂದಿರುವ ಸಿಬ್ಬಂದಿ ನಿಯೋಜಿಸಲಾಗಿದೆ. ಸರ್ಕಾರ ಇಂತಹ ಕ್ರಮವಹಿಸುತ್ತಿದ್ದರೂ, ಪೊಲೀಸರ ಕೈಗೆ ಸಿಕ್ಕ ಸೈಬರ್ ವಂಚಕರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು ಮಾತ್ರ.

ಕೃತ್ಯ ಎಸಗಿರುವವರು ದೂರದ ಹೊರ ರಾಜ್ಯ, ಹೊರ ದೇಶದಲ್ಲಿ ಇರುವುದರಿಂದ ಅಲ್ಲಿಗೆ ಹೋಗಿ ಅವರು ಇರುವ ಸ್ಥಳವನ್ನು ಪತ್ತೆ ಮಾಡುವುದು ಸವಾಲಿನ ಕೆಲಸ. ಅಲ್ಲದೆ ವೆಚ್ಚ ಕೂಡ ದುಬಾರಿ. ಇದರಿಂದ ಪೊಲೀಸರು ಕೂಡ ಹೆಚ್ಚು ಶ್ರವಹಿಸಲು ಸಾಧ್ಯವಾಗುತ್ತಿಲ್ಲ . ಹೀಗಾಗಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಸೈಬರ್ ವಂಚನೆ ಪ್ರಕರಣ ದಾಖಲಾಗಿದ್ದು, ಸೈಬರ್ ವಂಚಕರು ಸಿಕ್ಕಿ, ಶಿಕ್ಷೆಯಾಗಿರುವ ಪ್ರಕರಣಗಳ ಸಂಖ್ಯೆ 51 ಮಾತ್ರ. ಅಂದರೆ ಶೇ. 0.125 ರಷ್ಟು. ಒಂದೂವರೆ ಸಾವಿರ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಸೈಬರ್ ವಂಚನೆ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚಾಗಿದರೂ ಮೈಸೂರು, ಬೆಂಗಳೂರು ಗ್ರಾಮಾಂತರ, ಮಂಗಳೂರು, ಹುಬ್ಬಳ್ಳಿ-ಧಾರವಾಡ ನಗರದಲ್ಲಿ ನೂರಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.

ಸುಲಭವಾಗಿ ಹಣ ಸಂಪಾದನೆ ಮಾಡಬೇಕು ಎಂಬ ಶಿಕ್ಷಿತರ ಆಸೆಯನ್ನೇ ಬಂಡವಾಳವಾಗಿಸಿಕೊಂಡಿರುವ ಸೈಬರ್ ವಂಚಕರು ಎಲ್ಲಿಯೋ ಕುಳಿತು ಸೆಲೆಬ್ರಿಟಿಗಳ ಪ್ರೊಫೈಲ್ ಲೈಕ್, ಕಮೆಂಟ್, ಪ್ರವಾಸಿ ತಾಣಗಳಿಗೆ ರೇಟಿಂಗ್ ನೀಡಿದರೆ ಸಿಗುವ ಕಮಿಷನ್ ಆಸೆ, ಕ್ರಿಪ್ಟೋ ಕರೆನ್ಸಿಯಲ್ಲಿ ಬಂಡವಾಳ ಹೂಡಿಕೆ.. ಹೀಗೆ ನಾನಾ ಮಾರ್ಗದ ಮೂಲಕ ಆನ್‌ಲೈನ್‌ನಲ್ಲಿ ವಂಚನೆ ಮಾಡುತ್ತಿದ್ದಾರೆ. ವಂಚಕರ ದೂರವಾಣಿ ಸಂಖ್ಯೆಯ ಮೂಲಕ ವಿಳಾಸ ಪತ್ತೆ ಹಚ್ಚಲು ಹೊರಟರೆ ಅದು ದೇಶದ ಯಾವುದೋ ಮೂಲೆಯಲ್ಲಿರುವ ವಿಳಾಸ ತೋರಿಸುತ್ತದೆ. ಹೇಗೋ ವಿಳಾಸ ಪತ್ತೆ ಮಾಡಿದರೆ ಮೊಬೈಲ್ ಸಂಖ್ಯೆಯ ಮಾಲೀಕರೇ ಆ ವಿಳಾಸದಲ್ಲಿ ಇರುವುದಿಲ್ಲ. ಇನ್ನು ಸೈಬರ್ ವಂಚಕರು ವರ್ಗಾವಣೆ ಮಾಡಿಕೊಳ್ಳುವ ಬ್ಯಾಂಕ್ ಖಾತೆಯ ಮೂಲ ಬೆನ್ನತ್ತಿದ್ದರೆ ಅದರ ನಿಜವಾದ ಗ್ರಾಹಕರು ಬೇರೆಯಾಗಿದ್ದು, ವಂಚನೆಯಾದ ಹಣ ಕೈಗೆ ಸಿಗದೇ ಇರುವ ಮಟ್ಟಿಗೆ ವಿಲೇವಾರಿಯಾಗಿರುತ್ತದೆ.

ಸೈಬರ್ ವಂಚನೆಯಡಿ ದಾಖಲಾದ ಪ್ರಕರಣಗಳಲ್ಲಿ ಪೊಲೀಸರಿಗೆ ವಂಚಕರು ಬಳಸಿದ ಮೊಬೈಲ್ ಸಂಖ್ಯೆ ಸಿಕ್ಕರೂ ಅದರಿಂದ ಪ್ರಕರಣ ಪತ್ತೆ ಕಠಿಣವಾಗಿದೆ. ಸೈಬರ್ ಕ್ರೈಂ ಪತ್ತೆಗೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಕ್ತ ತರಬೇತಿ ಇಲ್ಲದಿರುವುದು, ಅತ್ಯಾಧುನಿಕ ತಂತ್ರಜ್ಞಾನದಿಂದ ತನಿಖೆ ಸಾಧ್ಯವಾಗದಿರುವುದು ಅಪರಾಧ ಕೃತ್ಯದ ಮೂಲ ಪತ್ತೆ ಹಚ್ಚಲು ಇರುವ ತೊಡಕು. ಅಲ್ಲದೆ ದಿನದಿಂದ ಇದಕ್ಕೆ ಹೊಸ ತಂತ್ರಜ್ಞಾನ ಆವಿಷ್ಕಾರಗೊಳ್ಳುತ್ತಿದ್ದು, ಪೊಲೀಸರಿಗೆ ಯಾಮಾರಿಸುವಷ್ಟು ನಿಪುಣತೆಯನ್ನು ವಂಚಕರು ಪಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಪೊಲೀಸರಿಗೂ ತಂತ್ರಜ್ಞಾನ ನಿಪುಣತೆ ತರಬೇತಿ ನೀಡಬೇಕಿದೆ. ಜತೆಗೆ ಆಸಕ್ತಿ ಇರುವ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೈಬರ್ ಅಪರಾಧಕ್ಕೆ ಕಡಿವಾಣ ಹಾಕಬೇಕಿದೆ.

ಜಾಗೃತಿಯೊಂದೇ ಪರಿಹಾರ

ಸೈಬರ್ ವಂಚಕರು ನಾನಾ ಆಮಿಷಗಳನ್ನು ಒಡ್ಡುವ ಮೂಲಕ ಜನರಲ್ಲಿ ಹಣದ ಆಸೆ ಹುಟ್ಟಿಸುತ್ತಾರೆ. ವಿದ್ಯಾವಂತರೇ ಹೆಚ್ಚು ಇಂತಹ ಪ್ರಕರಣದಲ್ಲಿ ಸಿಲುಕುತ್ತಿರುವುದು ದುರದೃಷ್ಟಕರ. ಹಾಗಾಗಿ ವಿದ್ಯಾವಂತರು ಆನ್‌ಲೈನ್ ವಹಿವಾಟು ನಡೆಸುವಾಗ ಬಹು ಎಚ್ಚರಿಕೆಯಿಂದ ಇರಬೇಕು. ಪ್ರಕರಣ ಭೇದಿಸಲು ತರಬೇತಿ ನೀಡಿದರೂ, ವಂಚಕರು ನಾನಾ ಬಗೆಯ ತಂತ್ರಗಾರಿಕೆ ಬಳಸುವುದರಿಂದ ಪತ್ತೆ ಕಾರ್ಯ ಕಷ್ಟವಾಗುತ್ತಿದೆ. ಆದ್ದರಿಂದ ಜಾಗೃತಿ ಒಂದೇ ಪರಿಹಾರ. ಸೈಬರ್ ಅಪರಾಧ ಕಂಡ ತಕ್ಷಣ 1930ಕ್ಕೆ ಕರೆ ಮಾಡಿ ಮಾಹಿತಿ ನೀಡಿ.

ಸೀಮಾ ಲಾಟ್ಕರ್

ಪೊಲೀಸ್ ಕಮೀಷನರ್, ಮೈಸೂರು ನಗರ

ವಿವಿಧ ಸಹಾಯವಾಣಿ ಸಂಖ್ಯೆ

ಸೈಬರ್ ಸಹಾಯವಾಣಿ --1930

ಮಹಿಳಾ ಸಹಾಯವಾಣಿ--1091

ಮಕ್ಕಳ ಸಹಾಯವಾಣಿ---1098