ಮೂಲ್ಕಿ: ಸಾಮಾಜಿಕ ಜಾಲತಾಣದಲ್ಲಿ ಆಮಿಷ ಒಡ್ಡಿ ಮೋಸ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ಜಾಗೃತರಾಗಬೇಕಾಗಿದೆ ಎಂದು ಮೂಲ್ಕಿ ಪೊಲೀಸ್ ಇನ್‌ಸ್ಪೆಕ್ಟರ್ ವಿದ್ಯಾಧರ್ ಹೇಳಿದರು.
ಲಯನ್ಸ್ ಹಾಗೂ ಲಿಯೋ ಕ್ಲಬ್ ವತಿಯಿಂದ ಮಂಗಳೂರು ನಗರ ಕಮಿಷನರೇಟ್, ಮೂಲ್ಕಿ ಪೊಲೀಸರ ಸಹಯೋಗದೊಂದಿಗೆ ಮೂಲ್ಕಿಯಲ್ಲಿ ಆಯೋಜಿಸಲಾಗಿದ್ದ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅಕ್ರಮವಾಗಿ ಗಾಂಜಾ, ಆಫೀಮು ಅಮಲು ಪದಾರ್ಥಗಳನ್ನು ಮಾರಾಟ ಮಾಡುವವರು ಹಾಗೂ ಇಸ್ಪೀಟ್ ಮಟ್ಕಾ, ಜೂಜು ಅಡ್ಡೆಗಳ ಬಗ್ಗೆ ಮಾಹಿತಿ ನೀಡಿ ಪೊಲೀಸರಿಗೆ ಸಹಕರಿಸಿ ಎಂದರು.
ಸೈಬರ್ ಕ್ರೈಂ ಅಧಿಕಾರಿ ಶಶಿಧರ್ ಪಟಗಾರ ಮಾತನಾಡಿ, ಕೋವಿಡ್ ಬಳಿಕ ಸೈಬರ್ ಕ್ರೈಂ ಸಂಖ್ಯೆ ಹೆಚ್ಚಾಗುತ್ತಿದ್ದು, ವರ್ಷದಲ್ಲಿ 50,000ಕ್ಕೂ ಹೆಚ್ಚು ಕ್ರೈಂ ನಡೆಯುತ್ತಿದೆ. 13ರಿಂದ 17 ವರ್ಷದ ಯುವಕ ಯುವತಿಯರು ಹೆಚ್ಚಾಗಿ ಸೈಬರ್ ಕ್ರೈಂಗೆ ಬಲಿಯಾಗಿದ್ದಾರೆ. ಅನಾಮಧೇಯ ಕರೆಗಳು ಬಂದರೆ ಎಚ್ಚರದಿಂದ ಇರಿ, ಆನ್‌ಲೈನ್ ರಮ್ಮಿ ಸರ್ಕಲ್, ಬೆಟ್ಟಿಂಗ್ ಲೋನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಡಿ, ಎಚ್ಚರ ತಪ್ಪಿದರೆ ಅಪಾಯ ಗ್ಯಾರಂಟಿ, ದೂರುಗಳಿದ್ದರೆ ಕೂಡಲೇ 112ನ್ನು ಸಂಪರ್ಕಿಸಿ ಎಂದರು.
ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶೀತಲ್ ಸುಶೀಲ್ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ಎಸ್.ಐ. ವಿನಾಯಕ ಬಾವಿಕಟ್ಟೆ, ಮೂಲ್ಕಿ ವಿಜಯ ಕಾಲೇಜು ಪ್ರಾಂಶುಪಾಲೆ ಫಮಿದಾ ಬೇಗಂ, ಕಿನ್ನಿಗೋಳಿ ಪಾಂಪೈ ಕಾಲೇಜಿನ ಪ್ರಾಂಶುಪಾಲ ಪುರುಷೋತ್ತಮ, ಸುಜಿತ್ ಸಾಲ್ಯಾನ್, ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈರ್‌ನ ಸ್ಥಾಪಕಾಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಮೂಲ್ಕಿ ಕಾರು ಚಾಲಕ ಮಾಲೀಕರ ಸಂಘದ ಅಧ್ಯಕ್ಷ ದೇವಣ್ಣ ನಾಯಕ್, ಆಟೋ ಚಾಲಕ ಮಾಲೀಕ ಸಂಘದ ಅಧ್ಯಕ್ಷ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು. ಸಿಬ್ಬಂದಿ ಯಶವಂತ್ ನಿರೂಪಿಸಿದರು. ಮೂಲ್ಕಿ ಪೊಲೀಸ್ ಠಾಣೆಯ ಎ.ಎಸ್.ಐ. ಸಂಜೀವ ವಂದಿಸಿದರು.