ಕಾರವಾರ: ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಅಪರಿಚಿತ ಕರೆಗಳು, ಸಂದೇಶಗಳನ್ನು ನಂಬಿ ಜನ ಮೋಸ ಹೋಗುತ್ತಲೇ ಇದ್ದಾರೆ.
ದೂರದ ರಾಜ್ಯಗಳಲ್ಲಿ ಕುಳಿತ ಸೈಬರ್ ಕಳ್ಳರು, ನಯವಾಗಿ ಮಾತನಾಡಿ, ಜನ ಕಷ್ಟಪಟ್ಟು ದುಡಿದು ಒಟ್ಟುಗೂಡಿಸಿಟ್ಟ ಕೋಟ್ಯಂತರ ರೂ.ಗಳನ್ನು ಲಪಟಾಯಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನದಲ್ಲಿ 4.69 ಲಕ್ಷ ರೂ. ಸೈಬರ್ ವಂಚನೆಯಾದ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಇನ್‌ಸ್ಟಾಗ್ರಾಂನಲ್ಲಿ ಬಂದ ಸಂದೇಶವೊಂದನ್ನು ನಂಬಿ ಹಣ ದ್ವಿಗುಣಗೊಳಿಸಿಕೊಳ್ಳುವ ಆಸೆಯಲ್ಲಿ ಅಪರಿಚಿತ ಖಾತೆಗಳಿಗೆ ಹಣ ಹೂಡಿಕೆ ಮಾಡಿದ ಸಿದ್ದಾಪುರದ ನರ್ಸ್ ಒಬ್ಬರು 2.19 ಲಕ್ಷ ರೂ.ಗಳನ್ನು ಕಳೆದುಕೊಂಡ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಮ್ಮ ಬ್ಯಾಂಕ್ ಖಾತೆಗಳಿಂದ ಅಗರವಾಲ್ ರಾಜೀವ ಕುಮಾರ್, ತಪೇಶ್ವರ ಭಗತ್ ಎಂಬುವವರ ಬ್ಯಾಂಕ್ ಖಾತೆಗಳಿಗೆ ನವೆಂಬರ್ 4 ರಿಂದ ಇದುವರೆಗೆ ಒಟ್ಟು, 2,19,023 ರೂ.ಗಳನ್ನು ವಿವಿಧ ಹಂತಗಳಲ್ಲಿ ಗೂಗಲ್ ಪೇ ಮೂಲಕ ಹಾಕಿದ್ದಾರೆ. ಆದರೆ, ಹಣ ಮರಳಿ ಬಾರದಾಗ ಕರೆ ಮಾಡಿ ಕೇಳಿದರೆ ವಂಚಕರು ಹಣ ಹಾಕಿರುವ ಬಗ್ಗೆ ನಕಲಿ ಮೆಸೇಜ್ ಕಳಿಸಿ ನಂಬಿಸಿದ್ದಾರೆ.
ಒಟಿಪಿ ಪಡೆದು ವಂಚನೆ:
ಕೆನರಾ ಬ್ಯಾಂಕ್ ಮ್ಯಾನೇಜರ್ ಹೆಸರಲ್ಲಿ ಶಿರಸಿಯ ವೆಲ್ಡಿಂಗ್ ಕೆಲಸ ಮಾಡು ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ವಂಚಕರು ಅವರ ಬ್ಯಾಂಕ್ ಖಾತೆಯ ವಿವರ, ಒಟಿಪಿ ಪಡೆದು, 2.50 ಲಕ್ಷ ರೂಗಳನ್ನು ಲಪಟಾಯಿಸಿಸಿದ್ದಾರೆ. ಈ ಬಗ್ಗೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.