ಕಾರಟಗಿ; ಜೀವನದಲ್ಲಿ ಅನಿರೀಕ್ಷಿತವಾಗಿ ಬಂದೆರಗುವ ಆಘಾತಗಳ ಸಂಕಷ್ಟದಿಂದ ಕುಟುಂಬವನ್ನು ಪಾರು ಮಾಡಲು ಸಾಮಾಜಿಕ ಭದ್ರತಾ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಎಸ್.ಬಿ.ಐ. ಆರ್ಥಿಕ ಸಾಕ್ಷರತಾ ಸಲಹೆಗಾರ ಟಿ.ಆಂಜನೇಯ ಹೇಳಿದರು.
ಇದನ್ನೂ ಓದಿ: ಸೈಬರ್ ಕ್ರೈಂ ಜಾಗೃತಿ ಜಾಥಾಕ್ಕೆ ಚಾಲನೆ
ತಾಲೂಕಿನ ಚಳ್ಳೂರು ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಬುಧವಾರ ನಡೆದ ಸಾಮಾಜಿಕ ಭದ್ರತಾ ಯೋಜನೆ ಕುರಿತ ಜಾಗೃತಿ ಅಭಿಯಾನ ಮತ್ತು ವಿಮಾ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಧ್ಯಮ ಹಾಗೂ ಬಡ ಕುಟುಂಬಗಳ ಪಾಲಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜೀವನಜ್ಯೋತಿ ಮತ್ತು ಜೀವನ ಸುರಕ್ಷಾ ವಿಮಾ ಯೋಜನೆ ಸೇರಿ ಸಾಮಾಜಿಕ ಭದ್ರತಾ ಯೋಜನೆಗಳು ವರದಾನವಾಗಿದ್ದು, ಸಂಕಷ್ಟದ ಸಮಯದಲ್ಲಿ ನೆರವಿನ ರೂಪದಲ್ಲಿ ಕೈ ಹಿಡಿಯುತ್ತಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಾಮಾಜಿಕ ಭದ್ರತಾ ಯೋಜನೆಗಳ ಲಾಭ ಪಡೆಯಿರಿ.
ಇನ್ನು, ಜು.01ರಿಂದ ಸೆ.30ರವರೆಗೆ ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನ ಜಾರಿ ಮಾಡಿದ್ದು, ಸಾಮಾಜಿಕ ಭದ್ರತಾ ಯೋಜನೆ, ಜನಧನ್ ಖಾತೆ, ಇ-ಕೆವೈಸಿ, ಬ್ಯಾಂಕ್ ಖಾತೆಗಳಿಗೆ ನಾಮಿನಿ ಸೇರಿ ಬ್ಯಾಂಕಿಂಗ್ ವಹಿವಾಟುಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ, ಬ್ಯಾಂಕಿಂಗ್ ವಲಯದಲ್ಲಿ ನಡೆಯುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ತಿಳಿಸಿದರು.
ಶಾಖಾ ವ್ಯವಸ್ಥಾಪಕ ಕೋಟೇಶ್ವರರಾವ್ ಮಾತನಾಡಿ, ಶಾಖೆ ವ್ಯಾಪ್ತಿಯಲ್ಲಿ ಕೃಷಿಕರು, ಸಣ್ಣ ಸಣ್ಣ ಗ್ರಾಹಕರಿದ್ದು 18ವರ್ಷ ಮೇಲ್ಪಟ್ಟ 70 ವಷರ್ದೊಳಗಿನ ಎಲ್ಲರೂ ವಿಮಾ ಸೌಲಭ್ಯ ಪಡೆಯಲು ತಿಳಿಸಿದರು. ನಂತರ ಇತ್ತೀಚೆಗೆ ನಿಧನರಾದ ಸಂಗಮೇಶರ ಪತ್ನಿ ದೇವಮ್ಮ ಮತ್ತು ಲಕ್ಷ್ಮೀ ಅವರ ಪತಿ ಮಾರೆಪ್ಪಗೆ ಚಳ್ಳೂರು ಶಾಖೆಯಿಂದ ತಲಾ ಎರಡು ಲಕ್ಷ ರೂ.ಗಳ ವಿಮಾ ಪರಿಹಾರ ನೀಡಲಾಯಿತು. ಬ್ಯಾಂಕ್ ಅಧಿಕಾರಿ ಸಂತೋಷ, ಸಿಬ್ಬಂದಿ ಮುನಯ್ಯ, ಕೃಷ್ಣಮೂರ್ತಿ ಇತರರಿದ್ದರು.