ಜಿಲ್ಲೆ

ಸೈನೈಡ್ ಮೋಹನ್‌ನ 20ನೇ ಪ್ರಕರಣವೂ ಸಾಬೀತು

Dakshina Kannada

ಮಂಗಳೂರು: ಸರಣಿ ಸ್ತ್ರೀ ಹಂತಕ ಸೈನೈಡ್ ಮೋಹನ್ ಕೇರಳದ ಕಾಸರಗೋಡಿನ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಬೆಂಗಳೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಸೈನೈಡ್ ಮಾತ್ರೆ ನೀಡಿ ಕೊಲೆ ಮಾಡಿದ ಪ್ರಕರಣ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶನಿವಾರ ಸಾಬೀತಾಗಿದೆ.

ಇದು ಸೈನೈಡ್ ಮೋಹನ್‌ನ 20ನೇ ಹಾಗೂ ಕೊನೆಯ ಪ್ರಕರಣವಾಗಿದ್ದು, ಶಿಕ್ಷೆಯ ಪ್ರಮಾಣದ ಬಗ್ಗೆ ವಿಚಾರಣೆ ಜೂ.24ರಂದು ನಡೆಯಲಿದೆ.

ಪ್ರಕರಣದ ಹಿನ್ನೆಲೆ: ಕಾಸರಗೋಡಿನ 25 ವರ್ಷದ ಯುವತಿ ಲೇಡಿಸ್ ಹಾಸ್ಟೆಲ್ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು, 2009ರಲ್ಲಿ ಆಕೆಗೆ ಮೋಹನನ ಪರಿಚಯವಾಗಿತ್ತು. ಆತ ಆಕೆಯನ್ನು ಮದುವೆ ಆಗುವುದಾಗಿ ಭರವಸೆ ನೀಡಿ 3 ಬಾರಿ ಆಕೆಯ ಮನೆಗೆ ಹೋಗಿ ನಂಬಿಸಿದ್ದ. 2009 ಜುಲೈ 8ರಂದು ಯುವತಿ ಸುಳ್ಯದ ದೇವಸ್ಥಾನಕ್ಕೆಂದು ಮನೆಯಿಂದ ಹೊರಟು ಹೋಗಿದ್ದು, ಸುಳ್ಯದಿಂದ ಮೋಹನ್ ಆಕೆಯನ್ನು ಬೆಂಗಳೂರಿಗೆ ಕರೆದೊಯ್ದಿದ್ದ. 3 ದಿನಗಳ ಬಳಿಕ ಮನೆ ಮಂದಿ ಆಕೆಗೆ ಕರೆ ಮಾಡಿದಾಗ ಮೋಹನ್ ಕರೆಯನ್ನು ಸ್ವೀಕರಿಸಿ, ಆಕೆ ಸ್ನಾನಕ್ಕೆ ಹೋಗಿದ್ದಾಳೆ, ನಾವು ಮದುವೆ ಆಗಿದ್ದು, ಶೀಘ್ರದಲ್ಲಿಯೇ ಮನೆಗೆ ವಾಪಾಸಾಗುತ್ತೇವೆ ಎಂದು ತಿಳಿಸಿದ್ದ.

ಬೆಂಗಳೂರಿನ ಲಾಡ್ಜ್‌ನಲ್ಲಿ ರೂಂ ಮಾಡಿದ್ದ ಮೋಹನ್ ಜು.15ರಂದು ಬೆಳಗ್ಗೆ ಯುವತಿಯನ್ನು ಸಮೀಪದ ಬಸ್ ನಿಲ್ದಾಣಕ್ಕೆ ಕರೆದೊಯ್ದು ಸೈನೈಡ್ ಮಾತ್ರೆ ನೀಡಿದ್ದ. ಅದನ್ನು ಸೇವಿಸಿದ ಆಕೆ ಶೌಚಗೃಹದ ಬಾಗಿಲಿನ ಬಳಿ ಕುಸಿದು ಬಿದ್ದಿದ್ದು, ಅಷ್ಟರಲ್ಲಿ ಮೋಹನ್ ಅಲ್ಲಿಂದ ತಪ್ಪಿಸಿಕೊಂಡಿದ್ದ. ಕುಸಿದು ಬಿದ್ದಿದ್ದ ಯುವತಿಯನ್ನು ಉಪ್ಪಾರಪೇಟೆ ಪೊಲೀಸ್ ಠಾಣೆ ಕಾನ್‌ಸ್ಟೇಬಲ್ ರಾಮಕೃಷ್ಣ ಅವರು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಆಕೆ ಸಾವನ್ನಪ್ಪಿದ್ದಳು.

2009 ಅಕ್ಟೋಬರ್‌ನಲ್ಲಿ ಮೋಹನ್ ಬಂಧಿತನಾದ ಸಂದರ್ಭ ಯುವತಿಯ ತಂಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಳು. ಈ ಪ್ರಕರಣದಲ್ಲಿ ಮೃತ ಯುವತಿಯ ವಿಸ್ರಾ ಪರೀಕ್ಷೆಯಲ್ಲಿ ಸೈನೈಡ್ ಅಂಶ ಇರುವುದು ದೃಢೀಕರಣಗೊಂಡಿತ್ತು.

ಆರೋಪಿ ಮೋಹನ್ ಯುವತಿಯನ್ನು ಸೈನೈಡ್ ತಿನ್ನಿಸಿ ಕೊಲೆ ಮಾಡಿರುವ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶ ಸಯೀದುನ್ನಿಸಾ ಅವರು ತೀರ್ಮಾನಕ್ಕೆ ಬಂದು ಆತ ತಪ್ಪಿತಸ್ಥ ಎಂದು ಘೋಷಿಸಿದ್ದಾರೆ.

ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಜುಡಿತ್ ಒ.ಎಂ. ಕ್ರಾಸ್ತಾ ಅವರು ಈ ಮೊದಲು ಹಾಗೂ ಪ್ರಸ್ತುತ ಜಯರಾಮ ಶೆಟ್ಟಿ ಅವರು ವಾದಿಸಿದ್ದರು.