ಮೂಡಿಗೆರೆ: ಒತ್ತುವರಿ ಜಮೀನು ಮೀಸಲು ಅರಣ್ಯಕ್ಕೆ ಸೇರಿದೆ ಎಂದು ರೈತರು ಬೆಳೆದ ಗಿಡಗಳನ್ನು ಕತ್ತರಿಸಿ ಖುಲ್ಲಾಗೊಳಿಸುತ್ತಿರುವುದು ಸರಿಯಲ್ಲ. ಈ ಪ್ರಕ್ರಿಯೆಯನ್ನು ಸರ್ಕಾರ ಕೈಬಿಡದಿದ್ದರೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ .ದಯಾಕರ್ ಎಚ್ಚರಿಸಿದರು.
ಒತ್ತುವರಿ ತೆರವು ವಿಚಾರವಾಗಿ ಅಧಿಕಾರಿಗಳು ಬ್ರಿಟಿಷರಿಗಿಂತ ಕ್ರೂರವಾಗಿ ವರ್ತಿಸುತ್ತಿದ್ದಾರೆ. ಮತ್ತಾವರ ಗ್ರಾಮದ ರಮೇಶ್ ಗೌಡ, ದಂಬದಹಳ್ಳಿ ಗ್ರಾಮದ ಚಂದ್ರೇಗೌಡ ಅವರಿಗೆ 1977ರಲ್ಲಿ ಮಂಜೂರಾದ 16 ಎಕರೆ ಜಾಗದಲ್ಲಿ ಕಾಫಿ, ಕಾಳುಮೆಣಸಿನ ಕೃಷಿ ಮಾಡಿಕೊಂಡಿದ್ದಾರೆ. ಅವರಿಗೆ ಅಧಿಕಾರಿಗಳು ನೋಟಿಸ್ ನೀಡದೆ ಏಕಾಏಕಿ ತೋಟಕ್ಕೆ ನುಗ್ಗಿ ಕಾಫಿ ಗಿಡಗಳನ್ನು ಕತ್ತರಿಸಿ ಜಾಗ ಖುಲ್ಲಾಗೊಳಿಸಿದ್ದಾರೆ. ಅಧಿಕಾರಿಗಳ ಕ್ರೂರ ವರ್ತನೆಯಿಂದ ರೈತರಿಗೆ ನಷ್ಟವಾಗಿದೆ. ಸರ್ಕಾರ ನಷ್ಟಭರಿಸುವ ಜತೆಗೆ ಜಾಗವನ್ನು ಮರಳಿ ಅವರಿಗೆ ಒಪ್ಪಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಬೆಂಗಳೂರು ಭಾಗಕ್ಕೆ ನಿರೋದಗಿಸುವ ಎತ್ತಿನಹೊಳೆ ಯೋಜನೆಯಿಂದ ಅಲ್ಲಲ್ಲಿ ಗುಡ್ಡ ಕುಸಿತ ಹೆಚ್ಚಾಗಿದೆ. ಗುಡ್ಡಗಳನ್ನು ಕತ್ತರಿಸಿ ಮರಗಳ ಮಾರಣಹೋಮ ನಡೆಸಿ ರೆಸಾರ್ಟ್, ಹೋಂ ಸ್ಟೇ ನಿರ್ಮಿಸುವುದರಿಂದ ಪಶ್ಚಿಮ ಘಟ್ಟ ಪ್ರದೇಶಕ್ಕೆ ಸಂಚಕಾರ ಉಂಟಾಗಿದೆ. ರೈತರಿಂದ ಅರಣ್ಯಕ್ಕೆ ತೊಂದರೆಯಾಗಿಲ್ಲ. ಮಳೆಗಾಲದಲ್ಲಿ ಗುಡ್ಡ ಕುಸಿತಕ್ಕೆ ರೈತರನ್ನು ಹೊಣೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಕೆಂಪೇಗೌಡ ಒಕ್ಕಲಿಗ ಸಂಘದ ತಾಲೂಕು ಅಧ್ಯಕ್ಷ ಬ್ರಿಜೇಶ್, ಸಂತೋಷ್, ಅಶ್ವಥ್ ಇದ್ದರು.