ಜಿಲ್ಲೆ

ಮೆಟ್ರೋ 3ನೇ ಹಂತ ವಿಸ್ತರಣೆಗೆ 6,800 ಮರ ತೆರವು

ಪವನ್ ಆಚಾರ್ಯ ನೀರ್ಚಾಲು

ಬೆಂಗಳೂರು: ನಮ್ಮ ಮೆಟ್ರೋದ 3ನೇ ಹಂತದ ನಿಮಾರ್ಣ ಕಾಮಗಾರಿಗಾಗಿ ಸುಮಾರು 6,800 ಮರಗಳನ್ನು ತೆರವು ಗೊಳಿಸುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​)ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಪ್ರಾರಂಭದಲ್ಲಿ 11,000 ಕ್ಕೂ ಅಧಿಕ ಮರಗಳನ್ನು ಕಡಿಯುವುದಾಗಿ ಬಿಎಂಆರ್​ಸಿಎಲ್​ ಅಂಕಿ&ಅಂಶ ನೀಡಿತ್ತು. ಈಗ ಅದನ್ನು ಪರಿಷ್ಕರಿಸಿ, ಸುಮಾರು 6,000ಕ್ಕೂ ಹೆಚ್ಚು ಮರಗಳನ್ನು ತೆಗೆದುಹಾಕಲಾಗುವುದಿಲ್ಲ. ಕೆಲವನ್ನು ಕತ್ತರಿಸಲಾಗುತ್ತದೆ, ಕೆಲವನ್ನು ಸ್ಥಳಾಂತರಿಸಲಾಗುತ್ತದೆ ಮತ್ತು ಕೆಲವನ್ನು ಉಳಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಮೆಟ್ರೋ ವಿಸ್ತರಣೆಯ ವೇಳೆ ಬೆಂಗಳೂರಿನ ಹಸಿರು ಹೊದಿಕೆಯ ಮೇಲೆ ಬೀರುವ ಪರಿಣಾಮದ ಬಗ್ಗೆ ಪರಿಸರವಾದಿಗಳು ಗಂಭೀರ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ತಾರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಇಐಎ ವರದಿ

ಹಂತ 3 ರ ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ವರದಿಯನ್ನು ಅಂತಿಮಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ವರದಿಯು ಆಗಸ್ಟ್​ ವೇಳೆಗೆ ಪರಿಶೀಲನೆಗೆ ಸಿದ್ಧವಾಗುವ ನಿರೀಕ್ಷೆಯಿದೆ ಮತ್ತು ಅಕ್ಟೋಬರ್​ನಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.