ಶೃಂಗೇರಿ: ಗ್ರಾಮೀಣ ಪ್ರದೇಶದ ವಿದ್ಯುತ್ ಲೈನ್ ಮೇಲೆ ಕಾಡು ಮರದ ರೆಂಬೆ ತಾಗಿಕೊಂಡಿದ್ದು, ಇದರಿಂದ ಸಮರ್ಪಕ ವಿದ್ಯುತ್ ಪೂರೈಕೆಗೆ ಅಡ್ಡಿಯಾಗಿದೆ ಎಂದು ವಿದ್ಯುತ್ ಬಳಕೆದಾರರು ಜನಸಂಪರ್ಕ ಸಭೆಯಲ್ಲಿ ದೂರಿದರು.
ಮೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಹಕರು ಮಾತನಾಡಿ, ಇಲಾಖೆ ಲೈನ್ ಸಮರ್ಪಕವಾಗಿರಿಸಬೇಕು ಎಂದು ಒತ್ತಾಯಿಸಿದರು.
ಬೆಳಂದೂರು ಕೃಷಿಕ ಸಾಯಿಪ್ರಕಾಶ್ ಮಾತನಾಡಿ, ಬೆಳಂದೂರು ಭಾಗದಲ್ಲಿ ಕಾಡುಮರ ವಿದ್ಯುತ್‌ಲೈನ್‌ಗೆ ತಾಗಿದ್ದು, ಮಳೆಗಾಲಕ್ಕೂ ಮುನ್ನ ರೆಂಬೆ ಕತ್ತರಿಸಬೇಕು. ಮೆಸ್ಕಾಂನಿಂದ ವಿದ್ಯುತ್ ಲೈನ್ ಜಂಗಲ್ ತೆರವು ಎಲ್ಲಿ ಆಗುತ್ತಿದೆ ಎಂಬ ಮಾಹಿತಿ ನೀಡಬೇಕು. ಕಾಡುಮರಗಳ ಜಂಗಲ್ ಕಟ್ಟಿಂಗ್ ಬೇಸಿಗೆಯಲ್ಲಿ ಮಾಡಬೇಕಿದೆ. ಮಳೆಗಾಲದಲ್ಲಿ ಮಾಡಿದರೆ ಯಾವುದೇ ಉಪಯೋಗವಿಲ್ಲ ಎಂದು ಹೇಳಿದರು.
ಆದಿತ್ಯ ಶೆಟ್ಟಿಹಳ್ಳಿ ಮಾತನಾಡಿ, ಮಸಿಗೆ ಗ್ರಾಮದಲ್ಲಿರುವ ನನ್ನ ಮನೆಗೆ ಪೂರೈಕೆಯಾಗುವ ಲೈನ್ ಮೇಲೆ ಇರುವ ಕಾಡುಮರದ ರೆಂಬೆ ಕತ್ತರಿಸುವಂತೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಕಂಬಗಳು ವಾಲಿಕೊಂಡಿವೆ. ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಮರಿಗೆಬೈಲಿನಲ್ಲಿ ವೊಲ್ಟೇಜ್ ಸಮಸ್ಯೆ ಇದ್ದು, ಹೆಚ್ಚುವರಿ ಪರಿವರ್ತಕ ಸ್ಥಾಪಿಸುವಂತೆ ರಾಮಪ್ಪನಾಯ್ಕ ಒತ್ತಾಯಿಸಿದರು.
ಕಲ್ಲಾಳಿ ನಾಗೇಶ್ ಮಾತನಾಡಿ, ಈ ವರ್ಷದ ಅತಿವೃಷ್ಟಿ ಸಂದರ್ಭದಲ್ಲಿ ಮೆಸ್ಕಾಂ ಲೈನ್‌ಮೆನ್‌ಗಳು ಹಾಗೂ ಅಧಿಕಾರಿಗಳ ಶ್ರಮದಿಂದ ವಿದ್ಯುತ್ ಸಂಪರ್ಕ ತ್ವರಿತವಾಗಿ ನೀಡಲು ಸಾಧ್ಯವಾಯಿತು ಎಂದರು.
ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ದೀಪಕ್ ಮಾತನಾಡಿ, ಪಟ್ಟಣದಲ್ಲಿ ಸ್ಥಾಪಿಸಲಾಗಿರುವ ಹೆಚ್ಚುವರಿ ವಿದ್ಯುತ್ ಪರಿವರ್ತಕದಿಂದ ತಾಲೂಕಿನ ವೊಲ್ಟೇಜ್ ಸಮಸ್ಯೆ ಕಡಿಮೆಯಾಗಲಿದೆ. ಇನ್ನೂ ವೊಲ್ಟೇಜ್ ಸಮಸ್ಯೆ ಇದ್ದಲ್ಲಿ ಸಮಸ್ಯೆ ಪರಿಹಾರ ಕಂಡುಕೊಳ್ಳಲಾಗುತ್ತದೆ. ತಾಲೂಕಿನಲ್ಲಿ ಜಂಗಲ್ ಕಟ್ಟಿಂಗ್ ಮಾಡಲಾಗುತ್ತಿದ್ದು, ಯಾವ ಪ್ರದೇಶಗಳಲ್ಲಿ ಆಗಲಿಲ್ಲವೋ ಅಲ್ಲಿ ತ್ವರಿತಗತಿಯಲ್ಲಿ ಮಾಡಿಸಲಾಗುವುದು ಎಂದರು.
ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸಿದ್ದೇಶ್, ಅಧಿಕಾರಿಗಳಾದ ರಾಜಪ್ಪ, ಹೊನ್ನೂರಪ್ಪ, ರವಿ ಮತ್ತು ರಾಮಚಂದ್ರ ಇದ್ದರು.