ವಿಜಯಪುರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಉಮಾದೇವಿ ಸೊನ್ನದಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಮನವಿ ಸಲ್ಲಿಸಿದರು. ಶಿವಾನಂದ ಯಡಹಳ್ಳಿ, ಗಣಪತಿ ರಾಠೋಡ, ಲಕ್ಷ್ಮಣ ಚಡಚಣ ಮತ್ತಿತರರಿದ್ದಾರೆ.  
ಜಿಲ್ಲೆ

ಖಾಸಗಿ ಶಾಲೆಗಳ ಶುಲ್ಕಕ್ಕೆ ಕಡಿವಾಣ ಹಾಕಿ; ಡಿಡಿಪಿಐಗೆ ಕೆಆರ್‌ಎಸ್ ಪಕ್ಷದಿಂದ ಮನವಿ

ವಿಜಯಪುರ: ಖಾಸಗಿ ಶಾಲೆಗಳ ಶುಲ್ಕಕ್ಕೆ ಕಡಿವಾಣ ಹಾಕಲು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಉಮಾದೇವಿ ಸೊನ್ನದಗೆ ಮನವಿ ಸಲ್ಲಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ 2024-25 ಸಾಲಿನ ಶಾಲಾ ಶುಲ್ಕವನ್ನು ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳು 30ರಿಂದ 40ರಷ್ಟು ಹೆಚ್ಚಿಗೆ ಪಡೆಯುತ್ತಿವೆ. ಇನ್ನು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘವು ತಮ್ಮ ಅಧೀನ ಶಾಲೆಗಳ ಶುಲ್ಕವನ್ನು ಮನಸೋ ಇಚ್ಚೆ ಹೆಚ್ಚಿಗೆ ಪಡೆಯುವಂತೆ ಪ್ರೇರೇಪಿಸಿದೆ. ಇದರಿಂದಾಗಿ ಮಧ್ಯಮ ಬಡ ಕೂಲಿ ಕಾರ್ಮಿಕ ವರ್ಗದ ಪಾಲಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶಾಲಾ ಶುಲ್ಕ ತುಂಬಲಾಗದೇ ತಮ್ಮ ಮಕ್ಕಳನ್ನು ಕರೆದುಕೊಂಡು ಹೊರ ರಾಜ್ಯಕ್ಕೆ ಗುಳೆ ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿದ್ದಾರೆ. ಕರ್ನಾಟಕ ಶಿಕ್ಷಣ ಮಸೂದೆ 1983 ಅಧಿನಿಯಮಗಳ ಅಡಿಯಲ್ಲಿ ಹೆಚ್ಚಿಗೆ ಶುಲ್ಕ ಪಡೆಯುವ ಶಾಲೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದರು.

ಕಾರ್ಯಕರ್ತರಾದ ದೀಪಾ ಮನೂರ, ಗಣಪತಿ ರಾಠೋಡ, ಲಕ್ಷ್ಮಣ ಚಡಚಣ, ರಾಕೇಶ ಇಂಗಳಗಿ, ಪ್ರವೀಣ ಕನಸೆ, ದುರ್ಗಪ್ಪ ಬೂದಿಹಾಳ, ವಿಕ್ರಮ ವಾಗಮೋರೆ, ಹಮಿದ ಇನಾಮದಾರ, ಚಂದ್ರಕಾಂತ ನಗರೆ, ರಾಘವೇಂದ್ರ ಛಲವಾದಿ ಮತ್ತಿತರರಿದ್ದರು.