ಸಾಗರ: ನಗರಕ್ಕೆ ತಾಗಿಕೊಂಡಿರುವ ಬಳಸಗೋಡು, ಉಳ್ಳೂರು, ನಗರದ ವಿಜಯನಗರ, ಗಾಂಧಿನಗರ, ಮಂಕಳಲೆ ಭಾಗಗಳಲ್ಲಿ ಸರ್ಕಾರದ ಭೂಮಿಗಳನ್ನು ನುಂಗಿ ಖಾಸಗಿ ಲೇಔಟ್‌ಗಳನ್ನು ನಿರ್ಮಿಸುವ ಭೂಗಳ್ಳರ ಜಾಲ ಹುಟ್ಟಿಕೊಂಡಿದೆ. ಕೆಲವು ಅಧಿಕಾರಿಗಳ ಮೇಲೆ ಪ್ರಭಾವ ಬಳಸಿ ಭೂಮಿ ನುಂಗುತ್ತಿದ್ದು ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಿ ಎಂದು ತಹಸೀಲ್ದಾರ್‌ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು, ಮಲೆನಾಡಿನ ರೈತರು, ಅಡಕೆ ಬೆಳೆಗಾರರು ಸೊಪ್ಪಿನ ಬೆಟ್ಟಗಳನ್ನು ಉಳಿಸಿಕೊಂಡು ಬಂದಿದ್ದಾರೆ, ಗುಡ್ಡದ ತಲೆಗಟ್ಟನ್ನೇ ಸವರಿ ರಾತ್ರೋರಾತ್ರಿ ನೆಲಸಮ ಮಾಡಿ ಸರ್ಕಾರಿ ಭೂಮಿಯಲ್ಲಿ ಅನಧಿಕೃತ ಲೇಔಟ್ ನಿರ್ಮಿಸುವ ಭೂಗಳ್ಳರ ಜಾಲವೊಂದಿದೆ. ಅಂತಹವರನ್ನು ಮಟ್ಟ ಹಾಕಲಾಗುತ್ತದೆ. ಸರ್ಕಾರಿ ಭೂಮಿಗಳನ್ನು ಪಟ್ಟಿಮಾಡಿ. ಯಾರಾದರೂ ಆ ರೀತಿಯ ಖಾಸಗಿ ಲೇಔಟ್‌ಗಳನ್ನು ನಿರ್ಮಿಸಿದ್ದರೆ ಅಂತಹವುಗಳನ್ನು ಕಿತ್ತೆಸೆದು ತಾಲೂಕು ಆಡಳಿತದಿಂದ ಬೇಲಿ ಹಾಕಿ ಸರ್ಕಾರದ ಜಾಗವನ್ನು ಕಾಪಾಡುವ ಜವಾಬ್ದಾರಿ ನಿಮ್ಮದು. ಪೊಲೀಸ್ ಇಲಾಖೆ ಕೂಡ ತಮಗೆ ಸಂಪೂರ್ಣ ಸಹಕಾರ ಕೊಡುತ್ತದೆ. ಈ ಬಗ್ಗೆ ಎಸ್ಪಿ ಜತೆ ಸಹ ಮಾತನಾಡಿದ್ದೇನೆ ಎಂದರು.
ಜೋಗ- ಕಾರ್ಗಲ್ ಭಾಗದ ವನ್ಯಜೀವಿ ವಿಭಾಗದಲ್ಲಿ ಯಾರಾದರೂ ಒತ್ತುವರಿ ಮಾಡಿದರೆ ಅವರ ಮೇಲೆ ಅಗತ್ಯ ಕ್ರಮಕೈಗೊಳ್ಳಿ. ಆದರೆ ಅವರಿಗೆ ತಿಳಿವಳಿಕೆ ನೀಡದೆ, ಹೆದರಿಸಿ ದೂರು ದಾಖಲಿಸಿದರೆ ನಾನು ಸಹಿಸುವುದಿಲ್ಲ. ಸಮಸ್ಯೆಯಿದ್ದರೆ ನನ್ನ ಗಮನಕ್ಕೆ ತನ್ನಿ. ಮೊನ್ನೆ ಬಿಲ್ಕಂದೂರಿನಲ್ಲಿ ಇಂತಹದೊಂದು ಪ್ರಕರಣ ನಡೆದಿದೆ. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ವನ್ಯಜೀವಿ ಇಲಾಖೆಯ ವಲಯ ಅರಣ್ಯಧಿಕಾರಿಗಳಿಗೆ ಸಭೆಯಲ್ಲಿ ಎಚ್ಚರಿಕೆ ನೀಡಿದರು.
ಜಿಪಂ ಉಪ ಕಾರ್ಯದರ್ಶಿ ಸುಜಾತಾ, ಡಿವೈಎಸ್ಪಿ ಗೋಪಾಲಕೃಷ್ಣ ಟಿ.ನಾಯ್ಕ, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ, ತಾಪಂ ಇಒ ನಾಗೇಶ್ ಬ್ಯಾಲಾಳ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.