ಜಿಲ್ಲೆ

ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ನೆಲಮಂಗಲ: ಗ್ರಾಮ ಪ್ರವಾಸ ವೇಳೆ ಗ್ರಾಮೀಣ ಭಾಗದಲ್ಲಿ ಆಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಸಾಕಷ್ಟು ಮಹಿಳೆಯರು ಅಲವತ್ತುಗೊಂಡಿದ್ದಾರೆ. ಅಬಕಾರಿ ಅಧಿಕಾರಿಗಳು ಆಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಶಾಸಕ ಎನ್.ಶ್ರೀನಿವಾಸ್ ಸೂಚಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಮದ್ಯ ಪೂರೈಕೆ ಮಾಡುವ ಬಾರ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಇತ್ತೀಚೆಗೆ ಮಳೆಯಿಂದ ರೈತರಿಗೆ ಭಾರಿ ಪ್ರಮಾಣದ ನಷ್ಟವಾಗಿದ್ದು, ರಾಗಿ ಕಟಾವು ಯಂತ್ರಕ್ಕೆ ಸರ್ಕಾರ ನಿಗಧಿಪಡಿಸಿರುವ ದರ ತಗೆದುಕೊಳ್ಳಬೇಕು. ಹೆಚ್ಚಿನ ದರ ತಗೆದುಕೊಂಡದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು. ಜನ ಸಂಪರ್ಕ ಸಭೆಗಳಲ್ಲಿ ಸಾರ್ವಜನಿಕರ ಅರ್ಜಿಗಳಿಗೆ ಸಂಬಂಧಪಟ್ಟಂತೆ ಪರಿಹಾರ ಒದಗಿಸಲು ಪ್ರತ್ಯೇಕ ಕಾರ್ಯದರ್ಶಿ ನಿಯೋಜನೆ ಮಾಡಿಕೊಂಡಿದ್ದು ಇಲಾಖಾವಾರು ಅರ್ಜಿಗಳಿಗೆ ಪರಿಹಾರ ಒದಗಿಸಲಾಗವುದು. ನಗರದಲ್ಲಿ ನೂತನ ಸಾರ್ವಜನಿಕ ಆಸ್ಪತ್ರೆ, ತಾಲೂಕು ಕಚೇರಿಗೆ ಕನಿಷ್ಟ 5 ಎಕರೆ ಜಾಗ ಸೇರಿ ಗೋಶಾಲೆಗೆ ಅಗತ್ಯವಿರುವ ಜಾಗವನ್ನು ಗುರುತಿಸುವಂತೆ ತಹಸೀಲ್ದಾರ್‌ಗೆ ತಿಳಿಸಿದರು.

ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ತೃಪ್ತಿಕರವಾಗಿಲ್ಲ. ಈಬಾರಿ ರಾಜ್ಯ ಹಾಗೂ ಜಿಲ್ಲೆ ಪ್ರಥಮ ಸ್ಥಾನ ಗಳಿಸುವ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳನ್ನು ತಯಾರು ಮಾಡಬೇಕು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.

ಶಿಕ್ಷಕರ ಸಮಸ್ಯೆಯನ್ನು ಆಲಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ತಾಲೂಕಿನಲ್ಲಿ ಹೋಬಳಿವಾರು ಗುರುಸ್ಪಂದನಾ ಕಾರ್ಯಕ್ರಮ ನಡೆಸಲಾಗುವುದು. ಜತೆಗೆ ತಿಂಗಳಿಗೊಮ್ಮ ತಾಲೂಕು ಮಟ್ಟದ ವಾರಕೊಮ್ಮೆ ಗ್ರಾಮಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಾಗುವುದು ಎಂದು ಶಾಸಕರು ತಿಳಿಸಿದರು.

ಸರ್ಕಾರ ಮಹತ್ವದ ಕಾರ್ಯ

ಗೃಹಲಕ್ಷ್ಮೀ ಯೋಜನೆಗೆ ತಾಲೂಕಿನ 45ಸಾವಿರ ಮಂದಿ ನೋಂದಾಹಿಸಿದ್ದು, 133ಕೋಟಿ ಹಣ ಜಮೆಯಾಗಿದೆ, ಗೃಹ ಜ್ಯೋತಿಗೆ 60ಕೋಟಿ ರೂ.ಅನ್ನಭಾಗ್ಯಕ್ಕೆ 2.43ಕೋಟಿ ಹಣ ನೀಡಲಾಗಿದೆ. ಜತೆಗೆ 69ಕೆರೆಗೆ ನೀರು ಪೂರೈಸುವ ಕಾರ್ಯ, 220ಕೆವಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ವಿಧಾನಸಭಾ ಕ್ಷೇತ್ರದಲ್ಲಿ 300ಕೋಟಿ ರೂ. ಹೆಚ್ಚು ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಸಲಾಗುವುದು ಎಂದು ಶಾಸಕ ಶ್ರೀನಿವಾಸ್ ಮಾಹಿತಿ ನೀಡಿದರು.

ಆಧಾರ್ ಜೋಡಣೆ ಯಶಸ್ವಿ

ಆಶ್ರಯ ಯೋಜನೆಯಡಿ 60 ಎಕರೆ ಜಾಗ ಮೀಸಲಿರಿಸಿದ್ದು, ಇನ್ನೂ 30 ಎಕರೆ ಜಾಗವನ್ನು ಗುರುತಿಸಿದ್ದು ಜಿಲ್ಲಾಧಿಕಾರಿ ಅನುಮೋದನೆಗೆ ಕಳಿಸಲಾಗುವುದು. ತಾಲೂಕಿನಲ್ಲಿ 243 ಗ್ರಾಮದಲ್ಲಿ ಸ್ಮಶಾನವಿದ್ದು, ಒತ್ತುವರಿಯಾಗಿದ್ದ 112 ಸನ್ಮಾಶ ತೆರವುಗೊಳಿಸಲಾಗಿದೆ. 421 ಪೋಡಿಗೆ ಅರ್ಜಿ ಬಂದಿದ್ದು ಬಹುತೇಕ ಬಗೆಹರಿಸಲಾಗಿದೆ. ತಾಲೂಕಿನಲ್ಲಿ ಪಹಣಿಗೆ ಆಧಾರ್ ಜೋಡಣೆ ಕಾರ್ಯ ಶೇ.80 ಸಾಧಿಸಲಾಗಿದೆ ಎಂದು ತಹಸೀಲ್ದಾರ್ ಅಮೃತ್‌ಆತ್ರೇಶ್ ಮಾಹಿತಿ ನೀಡಿದರು. ಆಶ್ರಯ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕು.ಪೋಡಿಮುಕ್ತ ಗ್ರಾಮ ಗುರುತಿಸಬೇಕು ಶಾಸಕ ತಿಳಿಸಿದರು.

ಸರ್ಕಾರಿ ಭೂಮಿ ರಕ್ಷಿಸಿ

ತಾಲೂಕಿನ ದೊಡ್ಡೇರಿ ಸರ್ವೆ.ನಂ23ರ 4 ಎಕರೆ ಜಾಗ ಕಿತ್ತೂರುರಾಣಿ ವಸತಿ ಶಾಲೆಗೆ ಮಂಜೂರಾಗಿದೆ. ಇದರ ನಡುವೆ ಕೆಲವರು ಆಕ್ರಮ ದಾಖಲೆ ಸೃಷ್ಟಿಸಿ ಭೂಮಿ ಕಬಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಈ ರೀತಿ ಮುರುಕಳಿಸದಂತೆ ಅಧಿಕಾರಿಗಳು ನಿಗಾವಹಿಸುವಂತೆ ಬಗರ್ ಹುಕ್ಕಂ ಸಮಿತಿ ಸದಸ್ಯ ವಕೀಲ ಹನುಮಂತೇಗೌಡ ತಿಳಿಸಿದರು.