ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸನಲ್ಲಿ ಬಿಡಿಸಿಸಿ ಬ್ಯಾಂಕ್ ಶಾಖೆಯ ನೂತನ ಕಟ್ಟಡ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಬುಧವಾರ ಉದ್ಘಾಟಿಸಿದರು. ನಿರ್ದೇಶಕರಾದ ಕುಮಾರಗೌಡ ಜನಾಲಿ, ಶಾಸಕ ಸಿದ್ದು ಸವದಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ಆನಂದ ನ್ಯಾಮಗೌಡ, ಎಸ್.ಟಿ. ಪಾಟೀಲ, ರಾಜಶೇಖರ ಶೀಲವಂತರ, ಪ್ರಕಾಶ ತಪಶೆಟ್ಟಿ, ಎಸ್.ಆರ್. ಮೆಳ್ಳಿ, ಬಿ.ಟಿ. ಬೆನಕಟ್ಟಿ ಇತರರಿದ್ದರು. 
ಜಿಲ್ಲೆ

ಗ್ರಾಹಕರು ಬಿಡಿಸಿಸಿ ಬ್ಯಾಂಕಿನ ಜೀವಾಳ

ಬಾದಾಮಿ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯ ನೀಡುತ್ತಿದೆ. ರಾಷ್ಟ್ರಿಕೃತ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುತ್ತಿದೆ. ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಹೇಳಿದರು.

ತಾಲೂಕಿನ ಕುಳಗೇರಿ ಕ್ರಾಸ್‌ನಲ್ಲಿ ಬುಧವಾರ ಬಿಡಿಸಿಸಿ ಬ್ಯಾಂಕ್ ಶಾಖೆಯ ನೂತನ ಕಟ್ಟಡ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ನಮ್ಮ ಡಿಸಿಸಿ ಬ್ಯಾಂಕ ಬೇರೆ ಬ್ಯಾಂಕುಗಳ ಪೈಪೋಟಿಗೆ ಸಮಾನಾರ್ಥವಾಗಿ ಎದುರಿಸುವುದರೊಂದಿಗೆ ಜೊತೆಗೆ ಗ್ರಾಹಕರಿಗೆ ಅತ್ಯಾಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುತ್ತಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತನ್ನದೆ ಛಾಪು ಮೂಡಿಸಿದೆ ಎಂದು ಹೇಳಿದರು.

ಸಾಲ ವಿತರಣೆ, ವಸೂಲಾತಿ ಜತೆಗೆ ರೈತರ ಹಿತ ರಕ್ಷಣೆಯನ್ನೂ ಕಾಪಾಡುತ್ತಿದೆ. ರೈತ ಕುಟುಂಬಗಳನ್ನು ವೈಯಕ್ತಿಕ ಅಪಘಾತ ವಿಮೆ ಯೋಜನೆಯಲ್ಲಿ ತೊಡಗಿಸಿದೆ ಸ್ವಸಹಾಯ ಗುಂಪುಗಳ ಸದಸ್ಯರ ಸಾಲಕ್ಕೆ ಆರ್ಥಿಕ ಭದ್ರತೆ ದೊರಕಲು ವಿಮೆ ಸೌಲಭ್ಯ ಕಲ್ಪಿಸಿದೆ ಎಂದು ತಿಳಿಸಿದರು.

ಬ್ಯಾಂಕ್ ಜಿಲ್ಲೆ ಜನರ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ. ಆರ್ಥಿಕವಾಗಿ ಹಿಂದುಳಿದವರನ್ನು ಆರ್ಥಿಕವಾಗಿ ಸಬಲಗೊಳಿಸುವ ಕೆಲಸ ಮಾಡುತ್ತಿದೆ. ಪ್ರಧಾನಮಂತ್ರಿ ಸಲ್ ಭೀಮಾ ಯೋಜನೆಯಡಿ ಬೆಳೆ ನೋಂದಣಿಯಲ್ಲಿ ವಿಮಾ ಮೊತ್ತ ಪ್ರಾಮಾಣಿಕವಾಗಿ ವಿತರಿಸುತ್ತಾ ಬಂದಿದೆ. ಗ್ರಾಹಕರೆ ಬ್ಯಾಂಕಿನ ಜೀವಾಳ, ಸಾಲ ಪಡೆದವರು ಸಕಾಲಕ್ಕೆ ಮರು ಪಾವತಿಸುವುದರ ಮೂಲಕ ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ ಮಾತನಾಡಿ, ಸಮಾಜದ ಎಲ್ಲ ವರ್ಗದ ಜನರನ್ನು ತಲುಪುವ ಕೆಲಸ ಡಿಸಿಸಿ ಬ್ಯಾಂಕ್ ಮಾಡಿದೆ. ಸಾವಿರಾರು ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ ಮಾತನಾಡಿ, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಬಿಡಿಸಿಸಿ ಬ್ಯಾಂಕ್ ಸದೃಢ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರ ಸಹಕಾರ ಸಕಾಲಕ್ಕೆ ಸಾಲ ಮರು ಪಾವತಿ ಮಾಡಿದರೆ, ಬ್ಯಾಂಕ್ ಉನ್ನತ ಮಟ್ಟದಲ್ಲಿ ಹೋಗುತ್ತದೆ ಎಂದು ತಿಳಿಸಿದ ಅವರು, ಕೆರೂರ ಶಾಖೆಯ ಕಟ್ಟಡ ಕೆಲಸ ಪ್ರಗತಿಯಲ್ಲಿದ್ದು, ನಂದಿಕೇಶ್ವರ ಶಾಖೆಯ ನೂತನ ಕಟ್ಟಡದ ಅಡಿಗಲ್ಲು ಸಮಾರಂಭ ಕೆಲಸ ಮುಗಿದಿದೆ. ಎರಡು ಶಾಖೆಗಳ ನೂತ ಕಟ್ಟಡಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಬ್ಯಾಂಕಿನ ನಿರ್ದೇಶಕರಾದ ಶಾಸಕ ಸಿದ್ದು ಸವದಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ಆನಂದ ನ್ಯಾಮಗೌಡ, ರಾಜಶೇಖರ ಶೀಲವಂತರ, ಪ್ರಕಾಶ ತಪಶೆಟ್ಟಿ, ಎಸ್.ಆರ್. ಮೆಳ್ಳಿ, ಬಿ.ಟಿ. ಬೆನಕಟ್ಟಿ, ಹನಮಂತ ಮಾವಿನಮರದ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಬಸವರಾಜ ಪಾಟೀಲ, ಕುಮಾರ ರೋಣದ ವಿವಿಧ ಮಠಾಧೀಶರು ಇದ್ದರು.