ಜಿಲ್ಲೆ

ಬ್ಯಾಂಕ್ ಮೆನೇಜರ್ ವಿರುದ್ಧ ಗ್ರಾಹಕರ ಆಕ್ರೋಶ

ಬಂಕಾಪುರ: ಪಟ್ಟಣದ ರಾಷ್ಟ್ರೀಕೃತ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಗ್ರಾಹಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ಖಂಡಿಸಿ ಸಾರ್ವಜನಿಕರು ಶುಕ್ರವಾರ ಅವರ ಕೊಠಡಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬ್ಯಾಂಕ್​ಗೆ ಬರುವ ಗ್ರಾಹಕರಿಗೆ ಇಲ್ಲಸಲ್ಲದ ಶಬ್ದಗಳಿಂದ ನಿಂದನೆ ಮಾಡುತ್ತಾರೆ. ಇದರಿಂದ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ದಾಖಲೆಗಳು ಸರಿ ಇಲ್ಲದಿದ್ದರೆ ನಮ್ಮ ಸಾಲ, ಸೌಲಭ್ಯಗಳನ್ನು ರದ್ದುಪಡಿಸಲಿ, ಆದರೆ ಅವಾಚ್ಯ ಶಬ್ದಗಳಿಂದ ಮಾತನಾಡುವುದು ಸರಿಯಲ್ಲ. ಇದರಿಂದ ಮಹಿಳೆಯರು ಬ್ಯಾಂಕ್​ಗೆ ಬರಲು ಹಿಂಜರಿಯುವಂತಾಗಿದೆ. ಇಂತಹ ಅಧಿಕಾರಿಗಳಿಂದ ಬ್ಯಾಂಕ್ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ತಕ್ಷಣ ಇಲ್ಲಿನ ಮ್ಯಾನೇಜರನ್ನು ವರ್ಗಾಯಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು, ಗ್ರಾಹಕರು ಆಗ್ರಹಿಸಿದರು.

ಗ್ರಾಹಕ ಕುಬೇರಪ್ಪ ಕೂಡಲ ಮಾತನಾಡಿ, ಬ್ಯಾಂಕಿಗೆ ಬಂದ ನನಗೆ ಫೈಲ್ ಅನ್ನು ಮೂರು ಫೂಟು ಮಣ್ಣಲ್ಲಿ ಮುಚ್ಚಿ ಹಾಕು. ಹೋಗಿ ನಿಮ್ಮ ತಂದೆಯನ್ನು ಕಳುಹಿಸು ಎಂದು ಹೇಳಿ, ಕಚೇರಿಗೆ ಬಂದ ನನ್ನ ತಂದೆಯನ್ನು ಸಹ ನಿಂದಿಸಿ ಕಳುಹಿಸಿದ್ದಾರೆ. ಇದರಿಂದ ಬಹಳಷ್ಟು ಬೇಸರವಾಗಿದೆ ಎಂದು ಅಳಲು ತೋಡಿಕೊಂಡರು.

ಗ್ರಾಹಕರಾದ ಬಾಬುರಾವ್ ಹಂಡೆ, ಪ್ರಭು ಹಿರೇಮಠ, ಮಲ್ಲೇಶಪ್ಪ ಮಾಳಗಿಮನಿ, ಸಿದ್ದಯ್ಯ ಗೌರಿಮಠ, ಬಸವರಾಜ ಹುರಳಿ, ಸಚಿನ್ ನಿರೋಳ್ಳಿ, ಪ್ರದೀಪ ಪೂಕಾಳೆ, ಶಿವು ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.