ಜಿಲ್ಲೆ

ಗ್ರಾಮೀಣ ವರ್ಗದ ಆರ್ಥಿಕ ಉನ್ನತಿಗೆ ಯೋಜನೆ: ಗ್ರಾಹಕರ ಸಂಪರ್ಕ ಸಭೆಯಲ್ಲಿ ಅನಿತಾ ಹೇಳಿಕೆ

ಸೌಮ್ಯ ಆರ್

ಮೂಲ್ಕಿ: ಗ್ರಾಮೀಣ ವರ್ಗದ ಜನರ ಆರ್ಥಿಕ ಉನ್ನತಿಗಾಗಿ ಸರ್ಕಾರ ಬ್ಯಾಂಕ್ ಮುಖೇನ ವಿಶೇಷ ಯೋಜನೆ ರೂಪಿಸಿದ್ದು, ಸಾರ್ವಜನಿಕರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮೂಲ್ಕಿ ಪಂಚಾಯಿತಿ ಸಮುದಾಯ ಸಂಪನ್ಮೂಲ ವ್ಯಕ್ತಿ ಅನಿತಾ ಹೇಳಿದರು.

ಮೂಲ್ಕಿ ಕಾರ್ನಾಡು ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದ ಗ್ರಾಹಕರ ಸಂಪರ್ಕ ಸಭೆಯಲ್ಲಿ ಮಾತನಾಡಿದರು. ಸರ್ಕಾರದ ಸಾಲ ಸೌಲಭ್ಯಗಳಾದ ಆತ್ಮ ನಿರ್ಭರ, ಬೀದಿಬದಿ ವ್ಯಾಪಾರದ ಯೋಜನೆ, ಪ್ರಧಾನಮಂತ್ರಿ ವಿಮಾ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.

ಶಾಖಾ ಪ್ರಬಂಧಕ ಸುನೀಲ್ ಜಿ.ನಾಯಕ್, ಬ್ಯಾಂಕಿನ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಬ್ಯಾಂಕ್‌ನ ಸಿಬ್ಬಂದಿ ಸುಮನಾ ಬಿ.ಹೆಗ್ಡೆ ಮಹಿಳೆಯರ ವಿಶೇಷ ಖಾತೆ ಕೆನರಾ ಏಂಜಲ್ ಬಗ್ಗೆ ಮಾಹಿತಿ ನೀಡಿ, ಸರ್ಕಾರದ ಸೌಲಭ್ಯಗಳಾದ ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಸೀನಿಯರ್ ಸಿಟಿಜನ್ ಖಾತೆ, ಅಟಲ್ ಪಿಂಚಣಿ ಯೋಜನೆ ಪ್ರಯೋಜನ ಪಡೆಯಲು ಸೂಚಿಸಿದರು. ಸಿಬ್ಬಂದಿ ಅಶ್ವಿನಿ, ಪ್ರೇಮಲತಾ ಶೆಟ್ಟಿ, ಪ್ರಕಾಶ್ ಹಾಗೂ ಗಣೇಶ್ ಉಪಸ್ಥಿತರಿದ್ದರು.