ಜಿ.ನಾಗರಾಜ್ ಬೂದಿಕೋಟೆ
ಗ್ರಾಮೀಣ ಪ್ರದೇಶ ಹಾಗೂ ಕಾಡಿನಲ್ಲಿ ಸಿಗುವ ಬಹು ಔಷಧೀಯ ಗುಣಗಳುಳ್ಳ ಸೀತಾಫಲ ವ್ಯಾಪಾರ ಗ್ರಾಮೀಣ ಜನರ ಕೈ ಹಿಡಿದಿದ್ದು, ತಾಲೂಕಿನಿಂದ ಪ್ರತಿ ನಿತ್ಯ ಟನ್ಗಟ್ಟಲೆ ಹಣ್ಣು ನಗರ ಪ್ರದೇಶಗಳಿಗೆ ರ್ತು ಮಾಡುವ ಮೂಲಕ ಆದಾಯ ಕಂಡುಕೊಂಡಿದ್ದಾರೆ.
ತಾಲೂಕಿನಲ್ಲಿ ನೂರಾರು ಎಕರೆ ಅರಣ್ಯ ಪ್ರದೇಶವಿದ್ದು, ಅರಣ್ಯ ಹಾಗೂ ರೈತರ ಜಮೀನಿನಲ್ಲಿ ಸೀತಾಫಲ ಗಿಡಗಳು ಯಥೇಚ್ಛವಾಗಿ ಬೆಳೆದಿದ್ದು, ಇವುಗಳು ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ನೂರಾರು ಜನರ ಜೀವನಕ್ಕೆ ಆಧಾರವಾಗಿವೆ. ನಿಸರ್ಗದಲ್ಲಿ ಉಚಿತವಾಗಿ ಸಿಗುವ ಸೀತಾಫಲ ಬಹು ಔಷಧೀಯ ಗುಣಗಳನ್ನು ಹೊಂದಿದೆ. ಆದ್ದರಿಂದಲೇ ಬೆಂಗಳೂರು ಸೇರಿ ತಮಿಳುನಾಡಿನ ಹಲವು ನಗರಗಳಲ್ಲಿ ಬಹಳ ಬೇಡಿಕೆ ಇದೆ. ತಾಲೂಕಿನ ಕದಿರಿನತ್ತ, ಕೋಡಗುರ್ಕಿ ಕಾಲನಿ, ಭೀಮಗಾನಹಳ್ಳಿ, ಯರಗೋಳ್, ಬಲಮಂದೆ, ದಿನ್ನೂರು, ಪಲಮಡಗು ಸೇರಿ ಇತರೆ ಗ್ರಾಮಗಳ ಜನರು ಮೂರ್ನಾಲ್ಕು ತಿಂಗಳುಗಳ ಕಾಲ ಸೀತಾಫಲ ಮಾರಾಟವನ್ನು ಮುಖ್ಯ ಕಸುಬಾಗಿಸಿಕೊಂಡಿದ್ದಾರೆ.
ಬೆಟ್ಟ, ಗುಡ್ಡಗಳು ಸೇರಿ ಅರಣ್ಯ ಪ್ರದೇಶದಲ್ಲಿ ಸಿಗುವ ಸೀತಾಫಲ ಕಾಯಿಗಳನ್ನು ಸಂಗ್ರಹಿಸಿ ಗ್ರಾಮಗಳಿಗೆ ಬರುವ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಾರೆ.ಸದ್ಯ ಪ್ರತಿ ಬುಟ್ಟಿ 300 ರೂ.ಗೆ ವ್ಯಾಪಾರಸ್ಥರು ಖರೀದಿಸುತ್ತಿದ್ದು, ಇಲ್ಲಿಂದ ನೇರವಾಗಿ ಬೆಂಗಳೂರು, ಹೈದ್ರಾಬಾದ್ ಸೇರಿ ತಮಿಳುನಾಡಿನ ಹಲವು ನಗರಗಳಿಗೆ ರಪ್ತು ಮಾಡಲಾಗುತ್ತಿದೆ.
ಗಡಿಭಾಗದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೀತಾಫಲ ಸಂಗ್ರಹಣೆಯಲ್ಲಿ ತೊಡಗಿದ್ದು, ಬೆಳ್ಳಂಬೆಳಗ್ಗೆ ಕಾಯಿ ಸಂಗ್ರಹಣೆಗೆ ತೆರಳಿ ಗಿಡಮರಗಳಿಂದ ಹಣ್ಣು ತೆಗೆದುಕೊಂಡು ಸ್ಥಳಿಯ ವ್ಯಾಪಾರಿಗಳಿಗೆ ಮಾರಾಟ ಮಾಡಿ ಜೀವನ ನಿರ್ವಹಣೆಗೆ ಮುಂದಾಗಿದ್ದಾರೆ. ಜತೆಗೆ ಕುರಿಗಾಹಿಗಳು ಕುರಿ ಮೇಯಿಸುವಾಗ ಕಾಯಿಗಳನ್ನು ಸಂಗ್ರಹಣೆ ಮಾಡಿ ಸಂಜೆ ವೇಳೆ ವ್ಯಾಪಾರಿಗಳಿಗೆ ಮಾರಾಟ ಮಾಡಿ ಹಣಗಳಿಸುತ್ತಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಸ್ಥಳಿಯವಾಗಿ ವ್ಯಾಪಾರಸ್ಥರು ವ್ಯಾಪಾರ ಆರಂಭಿಸಿದ್ದು, ಕಾಡಂಚಿನ ಹಾಗೂ ಗಡಿಭಾಗದ ಗ್ರಾಮಗಳ ಮಹಿಳೆಯರಿಂದ ಹಾಗೂ ಕುರಿಗಾಯಿಗಳಿಂದ ಕಾಯಿ ಖರೀದಿಸಿ ಬೆಂಗಳೂರಿನ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ. ಹಬ್ಬ ಹರಿದಿನಗಳ ಸಮಯದಲ್ಲಿ ಸೀತಾಫಲಕ್ಕೆ ಬೇಡಿಕೆ ಮತ್ತು ಬೆಲೆಯೂ ಹೆಚ್ಚಾಗುತ್ತದೆ. ಸದ್ಯ ಸುಮಾರು 20 ಕೆಜಿ ತೂಕದ ಬುಟ್ಟಿಯು 300 ರೂ.ನಿಂದ 400 ರೂ.ಗೆ ಮಾರಾಟವಾಗುತ್ತಿದ್ದು, ಪ್ರತಿಯೊಬ್ಬರೂ ದಿನಕ್ಕೆ 3 ರಿಂದ 4 ಬುಟ್ಟಿಯಷ್ಟು ಶೇಖರಣೆ ಮಾಡಿ ಮಾರಾಟ ಮಾಡುತ್ತಾರೆ.
ಔಷಧ ಗುಣ : ಸೀತಾಲ ಹಣ್ಣುಗಳಿಗೆ ಯಾವುದೇ ರಾಸಾಯನಿಕ ಗೊಬ್ಬರ, ಕೀಟ ನಾಶಕಗಳ, ಬಳಕೆ ಮಾಡದೇ ನೈಸರ್ಗಿಕವಾಗಿ ಬೆಳೆಯುತ್ತವೆ. ಹಣ್ಣಿನಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಸಿ ಸೇರಿ ಹಲವು ಪೋಷಕಾಂಶಗಳು ಹೇರಳವಾಗಿದ್ದು, ಬಲು ಔಷಧ ಗುಣಗಳನ್ನು ಹೊಂದಿದೆ. ಮಾನವನ ದೇಹಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸುವುದರೊಂದಿಗೆ, ಹೃದಯ ಸಂಬಂಧಿ ರೋಗಗಳು ಹರಡದಂತೆ ತಡೆಯುವುದರ ಜತೆಗೆ ಹಣ್ಣುಗಳು ಮಾನವನ ವಿವಿಧ ರೋಗಗಳಿಗೆ ರಾಮಬಾಣವಾಗಿದೆ ಅಂತಾರೆ ತಜ್ಞರು. ತಿನ್ನಲು ಬಲು ರುಚಿಯಿಂದ ಕೂಡಿರುವ ಸೀತಾಫಲ ವರ್ಷಕ್ಕೊಮ್ಮೆ ಸಿಗುವುದರಿಂದ ನಗರ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚಾಗಿದ್ದು, ಉತ್ತಮ ಗಾತ್ರದ ಹಣ್ಣುಗಳನ್ನು ಗ್ರಾಹಕರು 10 ರಿಂದ 15 ರೂ.ಗಳಿಗೆ ಖರೀದಿಸಿ ಖುಷಿಯಿಂದ ಸವಿಯುತ್ತಿದ್ದಾರೆ. ಆದರೆ ಮಧುಮೇಹಿಗಳು ಇದನ್ನು ಅಷ್ಟ್ಟಾಗಿ ಇಷ್ಟ್ಟಪಡುವುದಿಲ್ಲ.
ಈ ಬಾರಿ ಮಳೆಯಿಲ್ಲದೆ ಕಾಯಿಗಳ ಬೆಳವಣಿಗೆ ಸರಿಯಾಗಿ ಆಗಲಿಲ್ಲ. ತಾಲೂಕಿನ ಹತ್ತಾರು ಗ್ರಾಮಗಳ ಗ್ರಾಮಸ್ಥರಿಂದ ಟೆಂಪೋ ಮೂಲಕ ಸೀತಾಫಲದ ಕಾಯಿಗಳನ್ನು ಸಂಗ್ರಹಣೆ ಮಾಡಿ, ನೇರವಾಗಿ ಬೆಂಗಳೂರಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೀದ್ದೇನೆ. ಕಾಯಿ ಮಾರಾಟ ಫಲದಿಂದ ಪ್ರತಿಯೊಬ್ಬರೂ ಕನಿಷ್ಠ 600 ರಿಂದ 900 ದುಡಿಯುತ್ತಿದ್ದಾರೆ.
ವಿಜಯಕುಮಾರ್ ವ್ಯಾಪಾರಸ್ಥ
ಕಾಡಂಚಿನ ಗ್ರಾಮಸ್ಥರಿಗೆ ಸೀತಾಫಲ ವ್ಯಾಪಾರ ನಾಲ್ಕೈದು ತಿಂಗಳ ಕಾಲ ಕುಟುಂಬ ನಿರ್ವಹಣೆಗೆ ಆಸೆರೆಯಾಗಿದೆ. ಬಾಕ್ಸ್ ಒಂದಕ್ಕೆ 300 ರೂ.ನಂತೆ ತಮಿಳುನಾಡಿಗೆನಿಂದ ಬರುವ ವ್ಯಾಪಾರಸ್ಥರಿಗೆ ಮಾರಾಟ ಮಾಡಲಾಗುತ್ತಿದ್ದು, ನಮ್ಮ ಗ್ರಾಮದಿಂದಲೇ ನಿತ್ಯ 5,0-70 ಬಾಕ್ಸ್ ಮಾರಾಟ ಮಾಡುತ್ತಿದ್ದೇವೆ.
ಪಾರ್ವತಿಬಾಯಿ, ಕದರಿನತ್ತ