ಜಿಲ್ಲೆ

ಕರ್ಜಗಿಯೋ..ಹೊಸರಿತ್ತಿಯೋ....?

ಹಾವೇರಿ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ದಿನ ಗಣನೆ ಶುರುವಾಗಿದ್ದು, ಚುನಾವಣೆ ಆಯೋಗವು ಈಗಾಗಲೇ ಕ್ಷೇತ್ರ ವಿಂಗಡಣೆ ಕಾರ್ಯದಲ್ಲಿ ತೊಡಗಿದೆ. ಹೀಗಾಗಿ, ತಾಲೂಕಿನಲ್ಲಿ ಯಾವ್ಯಾವ ಕ್ಷೇತ್ರ ಬದಲಾವಣೆಯಾಗಲಿವೆ ಹಾಗೂ 6ನೇ ಜಿಪಂ ಕ್ಷೇತ್ರ ಯಾವುದಾಗಲಿದೆ ಎಂಬ ಕುತೂಹಲ ರಾಜಕೀಯ ನಾಯಕರಲ್ಲಿದೆ.

ತಾಲೂಕಿನಲ್ಲಿ ಈ ಮೊದಲು ಐದು ಜಿಪಂ ಕ್ಷೇತ್ರಗಳಿದ್ದವು. ಅದನ್ನೀಗ 6ಕ್ಕೆ ಏರಿಸಲು ಚುನಾವಣೆ ಆಯೋಗ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಮತ್ತೊಬ್ಬನಿಗೆ ಜಿಪಂ ಸದಸ್ಯನಾಗುವ ಅವಕಾಶ ಒದಗಿ ಬರಲಿದೆ. ಹೀಗಾಗಿ ನೂತನ ಕ್ಷೇತ್ರ ಆಕಾಂಕ್ಷಿಗಳಿಗೆ ಹಾಗೂ ಮತದಾರರಿಗೆ ಕುತೂಹಲ ಮೂಡಿಸಿದೆ.

ಚುನಾವಣೆ ನಿಯಮಾವಳಿ ಪ್ರಕಾರ ಹೆಚ್ಚಿನ ಜನಸಂಖ್ಯೆ ಹೊಂದಿರುವ ಗ್ರಾಮವನ್ನು ಜಿಪಂ ಕ್ಷೇತ್ರದ ಕೇಂದ್ರ ಸ್ಥಾನವನ್ನಾಗಿ ಘೊಷಿಸಲಾಗುತ್ತದೆ. ಸದ್ಯ ತಾಲೂಕಿನಲ್ಲಿ ಕರ್ಜಗಿ ಹಾಗೂ ಹೊಸರಿತ್ತಿ ಗ್ರಾಮಗಳು ಹೆಚ್ಚಿನ ಜನಸಂಖ್ಯೆ ಹೊಂದಿರುವ ಗ್ರಾಪಂಗಳ ಪಟ್ಟಿಯಲ್ಲಿವೆ. ಹೀಗಾಗಿ ಪ್ರಾದೇಶಿಕ ವಿಸ್ತರಣೆ ಗಮನದಲ್ಲಿಟ್ಟು ಎರಡರಲ್ಲಿ ಒಂದು ಗ್ರಾಮವನ್ನು ಕೇಂದ್ರ ಸ್ಥಾನವನ್ನಾಗಿ ಜಿಪಂ ಕ್ಷೇತ್ರ ವಿಂಗಡಿಸಲು ತಾಲೂಕು ಚುನಾವಣಾ ಧಿಕಾರಿಗಳು ರಾಜ್ಯ ಚುನಾವಣೆ ಆಯೋಗಕ್ಕೆ ವರದಿ ಸಲ್ಲಿಸಿದೆ.

ಹೊಸರಿತ್ತಿಯನ್ನೇ ಕೇಂದ್ರ ಸ್ಥಾನವನ್ನಾಗಿಸಿಕೊಂಡು ಜಿಪಂ ಕ್ಷೇತ್ರ ಘೊಷಣೆ ಸಾಧ್ಯತೆ ಹೆಚ್ಚಿರುವ ಮಾಹಿತಿ ಲಭ್ಯವಾಗಿದೆ. ಕರ್ಜಗಿ ಗ್ರಾಮವನ್ನು ಘೊಷಿಸಿದರೆ ಅಕ್ಕಪಕ್ಕ ದೇವಗಿರಿ, ಅಗಡಿ ಜಿಪಂ ಕ್ಷೇತ್ರಗಳಿವೆ. ಹೀಗಾಗಿ ಹೊಸರಿತ್ತಿ ಕೇಂದ್ರ ಸ್ಥಾನವನ್ನಾಗಿ ಮಾಡಿ ಜಿಪಂ ಕ್ಷೇತ್ರ ಮಾಡಿದರೆ ಪ್ರಾದೇಶಿಕವಾರು ಕ್ಷೇತ್ರ ವಿಂಗಡಣೆ ಸರಿಯಾಗುತ್ತದೆ ಎಂಬ ವಿಶ್ಲೇಷಣೆಯನ್ನು ಆಯೋಗ ನಡೆಸಿದೆ.

ಯಾವ್ಯಾವ ಗ್ರಾಮ ಸೇರ್ಪಡೆ...?: ಈ ಮೊದಲು ತಾಲೂಕಿನಲ್ಲಿ ದೇವಗಿರಿ, ಅಗಡಿ, ಕಬ್ಬೂರ, ನೆಗಳೂರ, ಹಾವನೂರ ಜಿಪಂ ಕ್ಷೇತ್ರಗಳಿದ್ದವು. ಇದೀಗ ಎಲ್ಲ ಕ್ಷೇತ್ರಗಳಲ್ಲಿನ ಒಂದು, ಎರಡು ಗ್ರಾಮಗಳನ್ನು ಜನಸಂಖ್ಯೆವಾರು ವಿಂಗಡಿಸಿ ನೂತನ ಕ್ಷೇತ್ರ ರಚನೆಗೆ ಸಿದ್ಧತೆ ನಡೆಸಲಾಗಿದೆ. ದೇವಗಿರಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಕರ್ಜಗಿಯನ್ನು, ನೆಗಳೂರ

ಕ್ಷೇತ್ರದಲ್ಲಿದ್ದ ಹೊಸರಿತ್ತಿಯನ್ನು ವಿಂಗಡಿಸಲಾಗಿದೆ. ಈ ಎರಡು ದೊಡ್ಡ ಗ್ರಾಮಗಳ ಜೊತೆಗೆ ಯಲಗಚ್ಚ, ರಾಮಾಪುರ, ಕೋಣನತಂಬಿಗಿ, ಅಗಸನಮಟ್ಟಿ, ಶಿರಮಾಪುರ, ಮಣ್ಣೂರ, ಕೆಸರಳ್ಳಿ,

ಹೊಸರಿತ್ತಿ, ಚನ್ನೂರ, ಅಕ್ಕೂರ, ಹಳೇರಿತ್ತಿ, ಕರ್ಜಗಿ, ಯತ್ತಿನಹಳ್ಳಿ ಗ್ರಾಮಗಳನ್ನು ಸೇರ್ಪಡೆಗೊಳಿಸಲಾಗಿದೆ. ಈ ಎಲ್ಲ ಗ್ರಾಮಗಳ ಒಟ್ಟು ಜನಸಂಖ್ಯೆ 32,691 ರಷ್ಟಾಗಲಿದೆ.

ಒಟ್ಟಿನಲ್ಲಿ ಈ ಬಾರಿಯ ಚುನಾವಣೆಗೂ ಮುನ್ನ ಕ್ಷೇತ್ರ ಬದಲಾವಣೆ ಹಾಗೂ ನೂತನ ಕ್ಷೇತ್ರ ಸೇರ್ಪಡೆ ಕಾರ್ಯ ಭರದಿಂದ ಸಾಗಿದೆ. ಚುನಾವಣೆಗೆ ಸ್ಪರ್ಧಿಸಲು ಸದ್ದಿಲ್ಲದೆ ಸಿದ್ಧತೆ ನಡೆಸಿರುವ ವಿವಿಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಚುನಾವಣೆ ಆಯೋಗದ ಘೊಷಣೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.