ಬೆಂಗಳೂರು: ಕಳೆದೊಂದು ವಾರದಿಂದ ನಗರದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಬುಧವಾರ ತೆರೆಬಿದ್ದಿದೆ. ದರ್ಶನ್ ನಟನೆಯ ‘ಮುನಿರತ್ನ ಕುರುಕ್ಷೇತ್ರ’ ಮತ್ತು ‘ಯಜಮಾನ’ ಚಿತ್ರಗಳು ಎರಡು ಪ್ರಶಸ್ತಿಗಳನ್ನು ಗಳಿಸಿವೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಹಮ್ಮಿ ಕೊಂಡಿದ್ದ ಸಮಾರೋಪದಲ್ಲಿ ರಾಜ್ಯಪಾಲ ವಿ.ಆರ್. ವಾಲಾ ಮತ್ತು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರಶಸ್ತಿಗಳನ್ನು ವಿತರಿಸಿದರು.
ಬೆಲ್ಬಾಟಮ್ೆ 2ನೇ ಸ್ಥಾನ: ವರ್ಷದ ಜನಪ್ರಿಯ ಚಿತ್ರ ವಿಭಾಗದಲ್ಲಿ ‘ಮುನಿರತ್ನ ಕುರುಕ್ಷೇತ್ರ’ ಮೊದಲ ಸ್ಥಾನ ಪಡೆದರೆ, ರಿಷಬ್ ಶೆಟ್ಟಿ ನಟನೆಯ ‘ಬೆಲ್ಬಾಟಮ್ ದ್ವಿತೀಯ ಪ್ರಶಸ್ತಿಗೆ ಪಾತ್ರವಾಯಿತು. ‘ಯಜಮಾನ’ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಕನ್ನಡ ಸ್ಪರ್ಧಾತ್ಮಕ ವಿಭಾಗದಲ್ಲಿ ‘ಕವಲುದಾರಿ’ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರೆ, ‘ಒಂದು ಶಿಕಾರಿಯ ಕಥೆ’ ಮತ್ತು ‘ರಂಗನಾಯಕಿ’ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾದವು. ‘ಸೆಲ್ಪಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರಕ್ಕೆ ತೀರ್ಪಗಾರರ ವಿಶೇಷ ಪ್ರಶಸ್ತಿ ಲಭಿಸಿತು. ತುಳು ಚಿತ್ರ ‘ಪಿಂಗಾರ’ಗೆ ನೆಟ್ಪ್ಯಾಕ್ ಅಂತಾರಾಷ್ಟ್ರೀಯ ಜ್ಯೂರಿ ಪ್ರಶಸ್ತಿ ದೊರೆಯಿತು.
ಫಂಗ್ರುನ್ಗೆ ಅವಾರ್ಡ್: ಚಿತ್ರಭಾರತಿ ಭಾರತೀಯ ಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಮಹೇಶ್ ಮಂಜ್ರೇಕರ್ ನಿರ್ದೇಶನದ ‘ಫಂಗ್ರುನ್’ ಅತ್ಯುತ್ತಮ ಚಿತ್ರ ಪ್ರಶಸ್ತಿ ತನ್ನದಾಗಿಸಿಕೊಂಡರೆ, ಮಲಯಾಳಂನ ‘ಬಿರಿಯಾನಿ’ ಹಾಗೂ ‘ಜ್ವಲ್ವಿ’ ಚಿತ್ರಗಳು ತೀರ್ಪಗಾರರ ವಿಶೇಷ ಪ್ರಶಸ್ತಿ ಪಡೆದವು. ಸಿದ್ದಾರ್ಥ್ ತ್ರಿಪಾಠಿ ನಿರ್ದೇಶನದ ‘ದಿ ಡಾಗ್ ಆಂಡ್ ಹಿಸ್ ಮ್ಯಾನ್ ಚಿತ್ರಕ್ಕೆ ಫಿಪ್ರೆಸ್ಕಿ ಅಂತಾರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು. ಏಷ್ಯಾ ಸಿನಿಮಾ ಕಾಂಪಿಟೇಶನ್ ವಿಭಾಗದಲ್ಲಿ ಥಾಯ್ಲೆಂಡ್ನ ’ಹ್ಯಾಪಿ ಓಲ್ಡ್ ಇಯರ್ಸ್’ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿತು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಸಿನಿಮೋತ್ಸವದ ಕಲಾ ನಿರ್ದೇಶಕ ವಿದ್ಯಾಶಂಕರ್ ಮತ್ತಿತರರಿದ್ದರು.