ಮುದ್ದೇಬಿಹಾಳದಲ್ಲಿ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿದರು. ಮುಖಂಡರಾದ ಶ್ರೀಕಾಂತ ಚಲವಾದಿ, ಸುರೇಶಗೌಡ ಪಾಟೀಲ, ಕಾಮರಾಜ ಬಿರಾದಾರ, ವೈ.ಎಚ್.ವಿಜಯಕರ್, ಬಿ.ಕೆ.ಬಿರಾದಾರ, ಬಾಪುಗೌಡ ಪೀರಾಪೂರ, ಪ್ರಭುರಾಜ ಕಲಬುರ್ಗಿ ಇತರರಿದ್ದರು. 
ಜಿಲ್ಲೆ

ಹಾಲಿ ಶಾಸಕರ ವಿರುದ್ಧ ನಡಹಳ್ಳಿ ಆರೋಪ ಸುಳ್ಳು

ಮುದ್ದೇಬಿಹಾಳ: ಶಾಸಕ ಸಿ.ಎಸ್.ನಾಡಗೌಡರು ತಮ್ಮ 25 ವರ್ಷಗಳ ಆಡಳಿತಾವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಇದನ್ನು ಪರಿಗಣಿಸದೆ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಈಚೆಗೆ ಸುದ್ದಿಗೋಷ್ಠಿ ನಡೆಸಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ನಾಡಗೌಡರು ಶಾಸಕರಾದ ಒಂದೂವರೆ ವರ್ಷದಲ್ಲಿ 250-350 ಕೋಟಿ ರೂ.ವರೆಗೂ ಅನುದಾನ ತಂದು ಅಭಿವೃದ್ಧಿಗೆ ಅವಕಾಶ ಕಲ್ಪಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಪಂಚ ಗ್ಯಾರಂಟಿ ಮೂಲಕ ಜನರ ಏಳಿಗೆಗೆ ಶ್ರಮಿಸತೊಡಗಿದೆ. ಅದರಂತೆ ನಾಡಗೌಡರು ಸಹಿತ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಪಿಡಬ್ಲುೃಡಿಯಿಂದ 115.8 ಕೋಟಿ ರೂ., ಒಳಚರಂಡಿಗಾಗಿ 132.8 ಕೋಟಿ ರೂ., ಸಣ್ಣ ನೀರಾವರಿಗೆ 15.75 ಕೋಟಿ ರೂ., ಪ್ರೌಢಶಾಲೆಗಳಿಗೆ 1 ಕೋಟಿ ರೂ., ಸಿಎಂ ವಿಶೇಷ ಅನುದಾನದಡಿ ರಸ್ತೆಗಾಗಿ 50 ಕೋಟಿ ರೂ., ವಸತಿ ಯೋಜನೆಯಡಿ 49 ಕೋಟಿ ರೂ., ರೈತ ಸಂಪರ್ಕ ಕೇಂದ್ರಗಳಿಗೆ 4 ಕೋಟಿ ರೂ., ಇಂದಿರಾ ಕ್ಯಾಂಟೀನ್ ಪ್ರಾರಂಭ ಹೀಗೆ ಹಲವಾರು ಯೋಜನೆಗೆ ನೂರಾರು ಕೋಟಿ ರೂ. ಅನುದಾನ ತಂದಿದ್ದಾರೆ ಎಂದರು.

ಬೆಂಗಳೂರು ಬಿಡಿಎ, ವಿಜಯಪುರ, ಮುದ್ದೇಬಿಹಾಳ ಹುಡ್ಕೋದಲ್ಲಿ ಶಾಸಕ ನಾಡಗೌಡರು ನಿಯಮಕ್ಕಿಂತ ಹೆಚ್ಚು ಸೈಟ್ ಹೊಂದಿರುವ ಆರೋಪವನ್ನು ನಡಹಳ್ಳಿ ಅವರು ಮಾಡಿದ್ದಾರಲ್ಲ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಅವರು, ಮುದ್ದೇಬಿಹಾಳ ಹುಡ್ಕೋದಲ್ಲಿ ಮನೆ ಖರೀದಿಸಲು ಯಾರೂ ಮುಂದೆ ಬರದಿದ್ದಾಗ ಅಂದಿನ ಸರ್ಕಾರ ಯಾರು ಮೂರಕ್ಕಿಂತ ಹೆಚ್ಚಿನ ಮನೆ ತೆಗೆದುಕೊಳ್ಳುತ್ತಾರೋ ಅಂಥವರಿಗೆ ವಿಶೇಷ ವಿನಾಯಿತಿ ನೀಡುವುದಾಗಿ ಹೊರಡಿಸಿದ್ದ ಆದೇಶವನ್ನು ನಾಡಗೌಡರು ಬಳಸಿಕೊಂಡಿರಬಹುದು. ಈ ಬಗ್ಗೆ ಹೆಚ್ಚಿನ ವಿಷಯವನ್ನು 3-4 ದಿನಗಳಲ್ಲಿ ಅವರೇ ನೀಡುತ್ತಾರೆ ಎಂದು ಹೇಳಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ತಾಪಂ ಮಾಜಿ ಅಧ್ಯಕ್ಷ ವೈ.ಎಚ್.ವಿಜಯಕರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿದರು. ಮುಖಂಡರಾದ ಅಬ್ದುಲ್‌ಗೂರ ಮಕಾನದಾರ, ಸುರೇಶಗೌಡ ಪಾಟೀಲ ಇಂಗಳಗೇರಿ, ಪ್ರಭುರಾಜ ಕಲಬುರಗಿ, ಶ್ರೀಕಾಂತ ಚಲವಾದಿ, ಬಾಪುಗೌಡ ಪೀರಾಪೂರ, ಯಲ್ಲಪ್ಪ ಚಲವಾದಿ, ಸಂಗಮೇಶ ನಾಲತವಾಡ, ತಿಪ್ಪಣ್ಣ ದೊಡಮನಿ ಇತರರಿದ್ದರು.