ಜಿಲ್ಲೆ

ಲೈವ್​ನಲ್ಲೇ ಹೋಯಿತು ಪ್ರಾಣ! ಹರಿಹರದಲ್ಲಿ ವಿದ್ಯುತ್​ ಅವಘಡಕ್ಕೆ ಬಲಿಯಾದ ಲೈನ್​ ಮ್ಯಾನ್​

Mandara

ದಾವಣೆಗೆರೆ: ವಿದ್ಯುತ್​ ಕಂಬದ ಮೇಲೆ ಹತ್ತಿ ವಿದ್ಯುತ್​ ತಂತಿ ದುರಸ್ತಿ ಮಾಡಲು ಹೊರಟಿದ್ದ ಲೈನ್​ ಮ್ಯಾನ್​ಗಳಿಗೆ ವಿದ್ಯುತ್​ ತಗುಲಿರುವ ಘಟನೆ ದಾವಣಗೆರೆಯ ಹರಿಹರದಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಲೈನ್​ ಮ್ಯಾನ್​ ಸಾವನ್ನಪ್ಪಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ.

ಬೆಸ್ಕಾಂನ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಲೈನ್​ ಮ್ಯಾನ್​ಗಳು ಭಾನುವಾರ ಹರಿಹರದ ಪಟೇಲ್​ ಬಡವಾಣೆಯ ಸಾಯಿಬಾಬ ಮಂದಿರದ ಬಳಿ ವಿದ್ಯುತ್​ ತಂತಿ ದುರಸ್ಥಿ ಮಾಡುತ್ತಿದ್ದರು. ಈ ವೇಳೆ ಅಚಾನಕ್ಕಾಗಿ ತಂತಿಯಲ್ಲಿ ವಿದ್ಯುತ್​ ಹರಿದಿದೆ. ಇದರಿಂದಾಗಿ ಮಾರುತಿ (24) ಹೆಸರಿನ ಲೈನ್​ ಮ್ಯಾನ್​ ಮೃತಪಟ್ಟಿದ್ದು, ಮಹೇಶ್​ (34) ಸ್ಥಿತಿ ಗಂಭೀರವಾಗಿದೆ. ಇವರಿಬ್ಬರು ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ನಿವಾಸಿಗಳು. ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಈ ಘಟನೆ ನಡೆದಿರಬಹುದಾದ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗಲೇ ವಿದ್ಯುತ್​ ತಗುಲಿ ಶವವಾಗಿರುವ ದೃಶ್ಯ ಸೆರೆಯಾಗಿದೆ.

ಕಳೆದ 15 ದಿನಗಳಿಂದ ಈ ಭಾಗದಲ್ಲಿ ಕೆಲಸ ಮಾಡಲಾಗುತ್ತಿದೆ. ಎಲ್ಲ ರೀತಿಯ ರಕ್ಷಣಾ ಸಾಮಾಗ್ರಿಯನ್ನು ಕೊಡಲಾಗಿತ್ತು. ಲೈನ್​ ಕೂಡ ಕ್ಲಿಯರ್​ ಮಾಡಿ ಕೊಡಲಾಗಿತ್ತು. ಆದರೆ ಅವರು ರಕ್ಷಣಾ ಸಾಮಾಗ್ರಿಗಳನ್ನು ಧರಿಸಿರಲಿಲ್ಲ. ಯಾರದ್ದೋ ಮನೆಯ ಯುಪಿಎಸ್​ ಅಥವಾ ಬೇರೆ ಏನೋ ತಾಂತ್ರಿಕ ದೋಷದಿಂದ ಈ ಘಟನೆ ಸಂಭವಿಸಿರಬಹುದು. ಇದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಸಿಸ್ಟೆಂಟ್​ ಇಂಜಿನಿಯರ್​ ಆಗಿರುವ ರಾಘವೇಂದ್ರ ಅವರು ತಿಳಿಸಿದ್ದಾರೆ.