ಜಿಲ್ಲೆ

ಹಳ್ಳಿಗಳಲ್ಲಿ ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಶಾಲಾ-ಕಾಲೇಜುಗಳ ಬಳಿ ಗಾಂಜಾ ಮಾರುವ ಪುಂಡರಿಗೆ ಪಾಠ ಕಲಿಸಿ | ದೊಡ್ಡಬಳ್ಳಾಪುರ ಉಪ ವಿಭಾಗದ ಡಿವೈಎಸ್‌ಪಿ ರವಿಗೆ ಮನವಿ

 ದೊಡ್ಡಬಳ್ಳಾಪುರ : ಜಿಲ್ಲಾ ಪೊಲೀಸ್ ಮತ್ತು ದೊಡ್ಡಬಳ್ಳಾಪುರ ಪೊಲೀಸ್ ಉಪವಿಭಾಗದ ವತಿಯಿಂದ ಎಸ್ಸಿ-ಎಸ್ಟಿ ಕುಂದು ಕೊರತೆಗಳ ಸಭೆಯನ್ನು ದೊಡ್ಡಬಳ್ಳಾಪುರ ನಗರದ ಆರ್.ಡಿ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಏರ್ಪಡಿಸಲಾಗಿತ್ತು.

ದೊಡ್ಡಬಳ್ಳಾಪುರ ಉಪ ವಿಭಾಗದ ಡಿವೈಎಸ್‌ಪಿ ರವಿ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ದೊಡ್ಡಬಳ್ಳಾಪುರ ಉಪವಿಭಾಗದ ವ್ಯಾಪ್ತಿಗೆ ಒಳಪಡುವ ಹಲವಾರು ಪರಿಶಿಷ್ಟ ಜಾತಿ-ಪಂಗಡದವರು ಮತ್ತು ಅನೇಕ ದಲಿತ ಮುಖಂಡರು ಭಾಗವಹಿಸಿ ಜನಾಂಗಕ್ಕೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಮಾಡಿದರು.

ಮುಖಂಡ ಮುನಿಯಪ್ಪ ಮಾತನಾಡಿ, ತಾಲೂಕಿನ ಶಾಲಾ-ಕಾಲೇಜುಗಳ ಬಳಿ ಗಾಂಜಾ ಮಾರಾಟದ ಹಾವಳಿ ತೀವ್ರವಾಗಿದ್ದು, ಅನೇಕ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಪೀಳಿಗೆ ಗಾಂಜಾ ವ್ಯಸನಿಗಳಾಗುತ್ತಿದ್ದಾರೆ, ಬೈಕ್ ವೀಲಿಂಗ್ ಸೇರಿ ಅನೇಕ ಸಮಾಜಘಾತುಕ ಚಟುವಟಿಕೆಗಳು ಹೆಚ್ಚಾಗುತ್ತಿದೆ, ಅನೇಕ ಗ್ರಾಮಗಳಲ್ಲಿ ಇಂದಿಗೂ ದಲಿತರಿಗೆ ದೇವಾಲಯದ ಪ್ರವೇಶ ನಿಷಿದ್ಧವಾಗಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ದೇವಾಲಯ ಪ್ರವೇಶ ನಿಷಿದ್ದ ಮಾಡುವವರ ಮೇಲೆ ಕ್ರಮ ಜರುಗಿಸಬೇಕಿದೆ ಎಂದು ಅಳಲು ತೋಡಿಕೊಂಡರು.

ರಾಮಾಂಜಿನಪ್ಪ ಮಾತನಾಡಿ, ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಅಬಕಾರಿ ಇಲಾಖೆ ಗಾಢ ನಿದ್ರೆಯಲ್ಲಿದೆ. ಪ್ರತಿ ಗ್ರಾಮಗಳಲ್ಲಿನ ಸಣ್ಣ ಪುಟ್ಟ ಅಂಗಡಿಗಳಲ್ಲಿ ದಿನಬಳಕೆಯ ವಸ್ತುಗಳ ರೀತಿಯಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದ್ದು, ಗಲಾಟೆಗಳು ಹೆಚ್ಚಾಗುತ್ತಿದೆ ಎಂದರು,

ಸಮಸ್ಯೆಗಳನ್ನು ಆಲಿಸಿದ ಡಿ.ವೈ.ಎಸ್.ಪಿ.ರವಿ ಮಾತನಾಡಿ, ಆಗುತ್ತಿರುವ ಸಮಸ್ಯೆಗಳ ಬಗ್ಗೆ ಶೀಘ್ರವಾಗಿ ಕ್ರಮವಹಿಸುವುದಾಗಿ ತಿಳಿಸಿ ದಲಿತರಿಗೆ ಯಾವುದೇ ರೀತಿಯ ತೊಂದರೆಗಳಾದಲ್ಲಿ ಇಲಾಖೆಗೆ ತಿಳಿಸಲು ಹೇಳಿದರು.  ನಗರ ಇನ್‌ಸ್ಪೆಕ್ಟರ್‌ಗಳಾದ ಅಮರೇಶ್ ಗೌಡ, ಹರಿವರ್ಧನ್, ಕಲ್ಲಪ್ಪ ಎಸ್ ಕರಾತ್, ದಿಲೀಪ್ ಕುಮಾರ್, ದಲಿತ ಮುಖಂಡರುಗಳಾದ ನಿಖಿಲ್, ರಾಮಾಂಜಿನಪ್ಪ, ಪಿಳ್ಳಪ್ಪ, ಟಿ.ಡಿ.ಮುನಿಯಪ್ಪ, ಮಾಲಿ ಜೈರಾಮ್, ಮಂಜುನಾಥ್ ಇದ್ದರು.