ಬೆಳಗಾವಿ: ಇಲ್ಲಿನ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತದಲ್ಲಿ ಕನ್ನಡ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಮೇಯರ್, ಉಪಮೇಯರ್ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರವು ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ, ಆಡಳಿತದಲ್ಲಿ ಕನ್ನಡ ಕಡ್ಡಾಯಗೊಳಿಸಿದ ಆದೇಶಕ್ಕೆ ನಾಡವಿರೋಧಿ ಎಂಇಎಸ್ ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ. ಹೀಗಾಗಿ ಯಾರದೋ ಒತ್ತಡಕ್ಕೆ ಮಣಿದು ಪಾಲಿಕೆಯಲ್ಲಿ ಕನ್ನಡೇತರ ಚಟುವಟಿಕೆ ಕೈಗೊಂಡರೆ ಪಾಲಿಕೆ ಸೂಪರ್ ಸೀಡ್ ಮಾಡಿಸಲು ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ ಎಚ್ಚಕೆ ನೀಡಿದರು.
ಪಾಲಿಕೆಯಲ್ಲಿ ಆಡಳಿತ ಭಾಷೆ ಕನ್ನಡವಾದ್ದರಿಂದ ಎಲ್ಲ ವ್ಯವಹಾರಗಳು ಕನ್ನಡದಲ್ಲಿಯೇ ನಡೆಯಬೇಕು. ಎಂಇಎಸ್ ಮುಖಂಡರು, ಕಾರ್ಯಕರ್ತರಿಗೆ ಪಾಲಿಕೆ ಒಳಗೆ ಪ್ರವೇಶ ನಿಷೇಧಿಸಬೇಕು. ಕನ್ನಡ ವಿರೋಧಿ ಚಟುವಟಿಕೆ ನಡೆಸುವ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೂಡಲೇ ಬೇರೆಡೆ ವರ್ಗಾವಣೆ ಮಾಡಬೇಕು. ಇಲ್ಲವೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಆದರ್ಶ ಘಸ್ತಿ, ಸುದೀಪ ಐಹೊಳೆ, ಮಹಾಂತೇಶ ಸನದಿ, ಶುಭಂ ಕಾಂಬಳೆ, ಅಮಿತ್ ಪೂಜಾರಿ ಇತರರಿದ್ದರು.