ಜಿಲ್ಲೆ

ಸಂಸ್ಕಾರಯುತ ಶಿಕ್ಷಣದಿಂದ ಸತ್ಪ್ರಜೆ ರೂಪಿಸಲು ಸಾಧ್ಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಆಧುನಿಕ ಯುಗದಲ್ಲಿ ಶಿಕ್ಷಣ ವ್ಯಾಪಾರಿಕರಣಗೊಳ್ಳುತ್ತಿದೆ. ಸಂಸ್ಕಾರಯುತ ಶಿಕ್ಷಣ ಮರೆಯಾಗುತ್ತಿದೆ. ವಿದ್ಯಾರ್ಥಿಗಳು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳು ಕೇವಲ ಶಿಕ್ಷಣ ನೀಡಿದರೆ ಸಾಲದು. ಶಿಕ್ಷಣದ ಜತೆಗೆ ವಿಧೇಯತೆ, ದೇಶ ಪ್ರೇಮ, ಸಂಸ್ಕಾರ ಕಲಿಸಿದಾಗಲೇ ಮಗು ಸತ್ಪ್ರಜೆಯಾಗಲು ಸಾಧ್ಯ ಎಂದು ಶ್ರೀಕ್ಷೇತ್ರ ಇಂಚಲದ ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಶ್ರೀ ಪೂರ್ಣಾನಂದ ಸ್ವಾಮೀಜಿ ಹೇಳಿದರು.

ನಗರದ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ 2024-25ನೇ ಸಾಲಿನ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳ ಸಂಕಲ್ಪೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಭಾರತೀಯ ಸಂಸ್ಕೃತಿ ಇನ್ನೊಬ್ಬರಿಗೆ ಅನುಕರಣೀಯವಾದ ಸಂಸ್ಕೃತಿಯಾಗಿದೆ. ಆ ಸಂಸ್ಕೃತಿ ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಇಂದಿನ ಮಕ್ಕಳ ಮೇಲಿದೆ ಎಂದರು.

ಶಾಲೆ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ಕೃಷ್ಣ ಜೋಶಿ ಮಕ್ಕಳಿಗೆ ಸಂಕಲ್ಪ ಬೋಧಿಸಿದರು. ಶಾಲೆ ಆಡಳಿತಾಧಿಕಾರಿ ಕುಮಾರಸ್ವಾಮಿ ಕುಲಕರ್ಣಿ, ಸತ್ತೂರಿನ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದ ಕರೆಸ್ಪಾಂಡೆಂಟ್​ ಗುರುರಾಜ ಅಗಡಿ, ಪಾಲಕರು, ಶಿಕ್ಷಕರು, ಇತರರು ಇದ್ದರು.

ದೀಪಾ ಸ್ವಾಗತಿಸಿದರು. ಡಾ. ಅನಿತಾ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಚಂದ್ರ ಭಟ್ಟ ನಿರೂಪಿಸಿದರು. ಶಶಿಕಾಂತ ನಾಯ್ಕ ವಂದಿಸಿದರು. ನಂತರ ವೇದ ಘೋಷ, ಭಗವದ್ಗೀತೆ ಪಠಣ, ಸಂಕಲ್ಪ ಬೋಧನೆ, ಮಾತಾ-ಪಿತೃ ಪಾದಪೂಜೆ ನಡೆದವು.