ಯಲ್ಲಾಪುರ: ನಮ್ಮಲ್ಲಿ ಧರ್ಮಶ್ರದ್ಧೆ ಹೆಚ್ಚಿದಾಗ ಮಾತ್ರ ಸನಾತನ ಧರ್ಮ, ಪರಂಪರೆ, ಸಂಸ್ಕೃತಿಯ ಉಳಿವು ಸಾಧ್ಯ ಎಂದು ತಾಲೂಕು ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.
ತಾಲೂಕಿನ ಹುಲಗಾನ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಗುರುವಾರ ರಾತ್ರಿ ವರ್ಧಂತಿ ಉತ್ಸವದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. ದೇವಾಲಯಗಳಲ್ಲಿ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದರೆ ಊರಿನಲ್ಲಿ ಒಗ್ಗಟ್ಟು, ಸಮನ್ವಯತೆಯ ಭಾವ ನೆಲೆಗೊಳ್ಳುತ್ತದೆ ಎಂದರು.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ನಮ್ಮ ಧಾರ್ವಿುಕ, ಸಾಂಸ್ಕೃತಿಕ ಆಚರಣೆಗಳಿಗೆ ವಿಶೇಷ ಮಹತ್ವವಿದ್ದು, ಅವುಗಳನ್ನು ಪೋಷಿಸುವ ಮತ್ತು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪತ್ರಕರ್ತ ಜಿ.ಎನ್. ಭಟ್ ತಟ್ಟಿಗದ್ದೆ ಮಾತನಾಡಿದರು. ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಎಸ್. ಭಟ್ಟ ತಟ್ಟಿಗದ್ದೆ ಅಧ್ಯಕ್ಷತೆ ವಹಿಸಿದ್ದರು.
ದೇವಾಲಯ ಅಭಿವೃದ್ಧಿಗೆ ಸಹಕರಿಸಿದ ವೆಂಕಟ್ರಮಣ ಹೆಗಡೆ ಚಿನ್ಮನೆ, ರಾಮಕೃಷ್ಣ ಭಟ್ಟ ಕೋಮಡಿ ಮುಂತಾದವರನ್ನು ಗೌರವಿಸಲಾಯಿತು. ಮೊಕ್ತೇಸರ ವೆಂಕಟ್ರಮಣ ಹೆಗಡೆ, ಪ್ರಮುಖರಾದ ನರಸಿಂಹ ಕೋಣೆಮನೆ, ಶ್ರೀಕೃಷ್ಣ ಭಟ್ಟ ಇತರರಿದ್ದರು. ನಾರಾಯಣ ಬೆಳ್ಳಿ ಸ್ವಾಗತಿಸಿ ನಿರ್ವಹಿಸಿದರು.
ವರ್ಧಂತಿ ಉತ್ಸವದ ನಿಮಿತ್ತ ವಿವಿಧ ಧಾರ್ವಿುಕ ಕಾರ್ಯಕ್ರಮಗಳು, ಮಾತೆಯರಿಂದ ಭಗವದ್ಗೀತಾ ಫಠಣ, ಶಾಂಕರ ಸ್ತೋತ್ರ ಪಠಣ, ಗಜಾನನ ಮಾರುತಿ ತಾಳಮದ್ದಳೆ ಕೂಟ ಹುಲ್ಲೋರಮನೆ ಅವರಿಂದ ರಾಮ ನಿರ್ಯಾಣ ತಾಳಮದ್ದಳೆ ನಡೆಯಿತು. ರಾತ್ರಿ ಖ್ಯಾತ ಕಲಾವಿದರಿಂದ ನಡೆದ ಚಕ್ರ ಚಂಡಿಕೆ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.