ಕೊಳ್ಳೇಗಾಲ: ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಕನ್ನಡ ಮಾಧ್ಯಮದಲ್ಲೇ ನೀಡಿದರೆ ನಾಡಿನ ಸಂಸ್ಕೃತಿ, ಸಂಸ್ಕಾರ ಉಳಿಯಲಿದೆ ಎಂದು ಸಾಲೂರು ಬೃಹನ್ಮಠದ ಮಠಾಧ್ಯಕ್ಷ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದತ್ತು ಸ್ವೀಕಾರ ಕಾರ್ಯಕ್ರಮ ಹಾಗೂ ಶ್ರೀ ಗುರುಮಲ್ಲೇಶ್ವರ ಬಸವ ಗದ್ದುಗೆ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರಸ್ತುತ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಎಲ್ಲರೂ ಮುಗಿಬಿದ್ದಿದ್ದಾರೆ. ಇದು ತಪ್ಪಬೇಕು. ಕನ್ನಡ ಶಾಲೆಯನ್ನು ಉಳಿಸುವ ಕೆಲಸ ಹೆಚ್ಚಾಗಬೇಕಿದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ. ಚಿತ್ರನಟ ಗಣೇಶ್‌ರಾವ್ ಹುಟ್ಟೂರಲ್ಲಿ ಓದಿದ ಶಾಲೆಯನ್ನು ದತ್ತು ಪಡೆದು ಸಮಾಜಕ್ಕೆ ಮಾದರಿಯಾಗಿದ್ದಾರೆ. ಗ್ರಾಮದಲ್ಲಿ ಬಸವನ ದೇಗುಲ ಕಟ್ಟಿಸಿ ಜನರಿಗೆ ಭಕ್ತಿ-ಭಾವ ಸಂಗಮ ಕೇಂದ್ರಿಕರಿಸುವ ಜತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪೂರಕವಾಗುವ ಕೆಲಸಕ್ಕೆ ಮುನ್ನುಡಿ ಬರೆದಿರುವುದು ಮೆಚ್ಚುವಂಥ ಕಾರ್ಯವಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಆರ್. ನರೇಂದ್ರ ಮಾತನಾಡಿ, ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಲ್ಲಿನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸ್ಪಂದಿಸುವುದು, ಪುಣ್ಯದ ಕೆಲಸ ಎಂದು ಹೇಳಿದರು.
ಹೆಚ್ಚು ಓದಿದವರು, ಹೆಚ್ಚು ಸಂಪಾದಿಸುವವರೇ ತಂದೆ, ತಾಯಿಯನ್ನು ವೃದ್ಧಾಶ್ರಮ ಸೇರಿಸುತ್ತಿರುವ ಸನ್ನಿವೇಶವನ್ನು ಕಾಣುತ್ತಿದ್ದೇವೆ. ಅಲ್ಲದೆ ಹುಟ್ಟಿ ಬೆಳೆದ ಊರು, ಹಿತೈಷಿಗಳನ್ನು ಮರೆತವರನ್ನು ಕಂಡಿದ್ದೇವೆ. ಈ ನಡುವೆಯೂ ಗಣೇಶ್ ರಾವ್ ಕೇಸರ್ಕರ್ ಅವರು ಶಾಲೆ ದತ್ತು ಸ್ವೀಕರಿಸಿ ಹಾಗೂ ಬಸವನ ಗದ್ದುಗೆ ನಿರ್ಮಿಸಿ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಕೊಳ್ಳೇಗಾಲ ತಾಲೂಕು ಅನೇಕ ಕಲಾವಿದರ ತವರೂರು. ವರನಟ ಡಾ. ರಾಜ್‌ಕುಮಾರ್ ಸೇರಿದಂತೆ ಅನೇಕ ಗಣ್ಯರು, ಮಹನೀಯರನ್ನು ದೇಶಕ್ಕೆ ಕೊಡುಗೆ ನೀಡಿದ ಹೆಮ್ಮೆಯ ತಾಲೂಕು. ನಮ್ಮವರೇ ಆದ ಎಸ್.ಮಹೇಂದರ್, ಮಹೇಶ್ ಬಾಬು, ಮಿಮಿಕ್ರಿ ಗೋಪಿ, ಚೇತನ್ ಸೇರಿದಂತೆ ಅನೇಕರು ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ನಿಟ್ಟಿನಲ್ಲಿ ನಟರಾಗಿ ಗಣೇಶ್‌ರಾವ್ ಅವರೂ ಉತ್ತಮ ಹೆಜ್ಜೆ ಇಟ್ಟಿದ್ದಾರೆ. ಅವರ ಮಾನವೀಯ ಸೇವೆ ನಿರಂತರವಾಗಿ ಸಾಗುವಂತಾಗಲಿ ಎಂದರು.
ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಗಣೇಶ್ ರಾವ್ ಅವರ ಕಾರ್ಯ ಶ್ಲಾಘಿನೀಯ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವುದರಿಂದ ಮಕ್ಕಳಿಗೆ ಎಲ್ಲ ಸೌಕರ್ಯಗಳು ಸಿಗಲಿವೆ ಎಂದು ಹೇಳಿದರು.
ಚಿತ್ರನಟ ಕೆ.ಗಣೇಶ್ ರಾವ್ ಕೇಸರ್ಕರ್, ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ತಾ.ಪಂ.ಮಾಜಿ ಸದಸ್ಯ ಸಿದ್ದಪ್ಪಾಜಿ, ಗ್ರಾಪಂ ಸದಸ್ಯ ಸಿದ್ದಪ್ಪಸ್ವಾಮಿ, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ವಾಸು, ಬಿಆರ್‌ಸಿ ಮಹದೇವ ಕುಮಾರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸ್ಟೀವನ್, ನಟ ಮಳವಳ್ಳಿ ಸಾಯಿಕೃಷ್ಣ, ರಾಷ್ಟ್ರೀಯ ವಾಲಿಬಾಲ್ ಪಟು ಸುರೇಶ್ ಸಿಂಧೆ, ವಲಯ ಅರಣ್ಯಾಧಿಕಾರಿ ಅನಂತರಾಜು, ಉಪ ವಲಯ ಅರಣ್ಯಾಧಿಕಾರಿ ಮಹೇಶ್, ಹಳ್ಳಿಕಾರ್ ಮಲ್ಲೇಶ್, ಬೆಂಗಳೂರಿನ ಖಾಸಗಿ ಸಂಸ್ಥೆ ಅಧ್ಯಕ್ಷ ಮನೋಜ್ ಕುಮಾರ್, ಚಿಕ್ಕತಾಂಡಶೆಟ್ಟಿ, ರಾಜಣ್ಣ, ಮಹದೇವಸ್ವಾಮಿ, ಪರಂಗುಬ್ಬಿ, ಚಲನಚಿತ್ರ ನಿರ್ದೇಶಕರಾದ ವಿಕ್ಟರಿ ವಾಸು, ಕೋಲಾರ ನಾಗೇಶ್, ಓಂಕಾರ್ ಪುರುಷೋತ್ತಮ್, ಆನಂದ್, ವೆಂಕಟರಾಮ್, ಹರ್ಷಪ್ಪ ಇತರರು ಇದ್ದರು.
ಶ್ರೀ ಗುರುಮಲ್ಲೇಶ್ವರ ಬಸವ ಗದ್ದುಗೆ ಸಂಪ್ರೋಕ್ಷಣೆ
ಚಲನಚಿತ್ರ ನಟ, ಹೊಂಡರಬಾಳು ಗ್ರಾಮದ ಕೆ.ಗಣೇಶ್ ರಾವ್ ಕೇಸರ್ಕರ್ ಅವರು ಹುಟ್ಟಿ ಬೆಳೆದ ಊರಿನ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ, ಇತ್ತೀಚೆಗೆ ಮೃತಪಟ್ಟ ಗ್ರಾಮದ ಬಸವನ ಸ್ಮರಣಾರ್ಥ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದ ಶ್ರೀ ಗುರುಮಲ್ಲೇಶ್ವರ ಬಸವ ಗದ್ದುಗೆಯ ಸಂಪ್ರೋಕ್ಷಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಎರಡೂ ಕಾರ್ಯಕ್ರಮಕ್ಕೂ ಸಾಲೂರು ಶ್ರೀಗಳು ಚಾಲನೆ ನೀಡಿದರು. ಹೊಂಡರಬಾಳು ಆದಿಗುರು ಶಂಖಿನಸ್ವಾಮಿ ಮಠಾಧ್ಯಕ್ಷರಾದ ಪಟ್ಟದ ವಿದ್ವಾನ್ ಶ್ರೀ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಇದ್ದರು.