ಚಿಕ್ಕಮಗಳೂರು : ಮಾನವನ ಮನಸ್ಸಿನಲ್ಲಿ ಬುದ್ಧಿ ಮತ್ತು ಸದ್ವಿಚಾರಗಳು ಬೆಳೆದು ಬಂದಾಗ
ಶ್ರೇಯಸ್ಸು ನಿಶ್ಚಿತ. ಆದರ್ಶ ಬದುಕಿಗೆ ಗುರು ಕಾರುಣ್ಯ ಧರ್ಮ ಶ್ರದ್ಧೆ ಅವಶ್ಯಕ. ಧರ್ಮದ
ದಿಕ್ಸೂಚಿ ಮಾನವನ ಬಾಳಿನ ಭಾಗ್ಯೋದಯಕ್ಕೆ ಅಡಿಪಾಯ ಎಂದು ಬಾಳೆಹೊನ್ನೂರು ಶ್ರೀ
ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಶುಕ್ರವಾರ ತಾಲೂಕಿನ ಮುಗುಳವಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಾಲಯದ
ಪ್ರವೇಶೋತ್ಸವ ಅಂಗವಾಗಿ ಆಯೋಜಿಸಿದ್ದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ
ಆಶೀರ್ವಚನ ನೀಡಿ, ಆಧುನಿಕ ಜಗತ್ತಿನಲ್ಲಿ ಪ್ರಗತಿಪರ ವಿಚಾರಧಾರೆಗಳ ಹೆಸರಿನಲ್ಲಿ
ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶಗೊಳ್ಳಬಾರದು. ಧರ್ಮ ಮತ್ತು ದೇಶ ಮನುಷ್ಯನ
ಎರಡು ಕಣ್ಣು. ಧರ್ಮ ಶ್ರದ್ಧೆ ಸಾಮರಸ್ಯ ರಾಷ್ಟಾಭಿಮಾನ ಬೆಳೆಸುವ ಗುರಿ ಎಲ್ಲರದೂ ಆಗಬೇಕು
ಎಂದು ಹೇಳಿದರು.
ರವಿ ಕಿರಣದಿಂದ ಪುಷ್ಪ ಅರಳುತ್ತದೆ. ಗುರು ಕರುಣ ಆತ್ಮವನ್ನು ಅರಳಿಸುತ್ತದೆ. ಶ್ರೀಜಗದ್ಗುರು
ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ಸಕಲರ ಬಾಳಿಗೆ ಬೆಳಕು
ತೋರುತ್ತವೆ. ಮುಗುಳವಳ್ಳಿ ಗ್ರಾಮದ ಸಕಲ ಸದ್ಭಕ್ತರ ಸಹಕಾರದಿಂದ ಭವ್ಯ ದಿವ್ಯ
ಶ್ರೀವೀರಭದ್ರೇಶ್ವರ ದೇವಾಲಯ ನಿರ್ಮಿಸಿರುವುದು ಸಂತೋಷದ ವಿಷಯ. ಇದಕ್ಕಾಗಿ
ಶ್ರಮಿಸಿದ ಎಲ್ಲ ಭಕ್ತರಿಗೆ ಶ್ರೀವೀರಭದ್ರೇಶ್ವರ ಸ್ವಾಮಿ ಶುಭ ತರಲಿ ಎಂದು ಶುಭ
ಹಾರೈಸಿದರು. ಹುಲಿಕೆರೆ ವಿರೂಪಾಕ್ಷಲಿಂಗ ಶಿವಾಚಾರ್ಯರು, ಶಂಕರದೇವರ ಮಠದ
ಚಂದ್ರಶೇಖರ ಶಿವಾಚಾರ್ಯರು, ಬೇರುಗಂಡಿ ಮಠದ ರೇಣುಕ ಮಹಂತ ಶಿವಾಚಾರ್ಯರು
ನುಡಿ ನಮನ ಸಲ್ಲಿಸಿದರು. ಫಲಹಾರಸ್ವಾಮಿ ಮಠದ ಮುರುಘೇಂದ್ರ ಶಿವಾಚಾರ್ಯರು
ನೇತೃತ್ವ ವಹಿಸಿದ್ದರು.