ಗದಗ: ಗದಗ ಜಿಲ್ಲೆಯಲ್ಲಿನ ಕಲೆ, ಸಾಹಿತ್ಯ, ವಾಸ್ತುಶಿಲ್ಪ ಸೇರಿದಂತೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಎಲ್ಲ ಸ್ಥಳಗಳನ್ನು ಬಳಸಿಕೊಂಡು ಇಡೀ ರಾಷ್ಟ್ರವೇ ಜಿಲ್ಲೆಯತ್ತ ಗಮನಹರಿಸುವಂತೆ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲಾಗುವದು ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ನಗರದ ಭೀಷ್ಮ ಕೆರೆ ಆವರಣದಲ್ಲಿ ಭಾನುವಾರದಂದು ವರ್ಣರಂಜಿತವಾಗಿ ಜರುಗಿದ ಉದಯರಾಗ, ಸಂಧ್ಯಾರಾಗ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮನುಕುಲದಲ್ಲಿ ಸಮಾನತೆ, ಸಮಭಾವನೆ, ಸಹೋದರತ್ವವನ್ನು ಬಿತ್ತಿದ ಬಸವಣ್ಣನವರ ಉದ್ಯಾನವನದಲ್ಲಿ ವರುಣನ ಕೃಪಾಶೀರ್ವಾದದಿಂದ, ಈ ಹಿಂದೆ ಕಾರಣಾಂತರಗಳಿಂದ ಸ್ಥಗಿತವಾಗಿದ್ದಂತಹ ಉದಯರಾಗ, ಸಂಧ್ಯಾರಾಗ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮತ್ತೆ ಪ್ರಾರಂಭಿಸಲಾಗುತ್ತಿದೆ. ಮಳೆಯನ್ನು ಲೆಕ್ಕಿಸದೆ ಈ ಕಾರ್ಯಕ್ರಮದಲ್ಲಿ ಸೇರಿರುವ ಜನಸ್ತೋಮವನ್ನು ಕಂಡು ಯಾವುದೇ ಕಾರಣಕ್ಕೂ ಇನ್ನು ಮುಂದೆ ಉದಯರಾಗ, ಸಂಧ್ಯಾರಾಗ ಕಾರ್ಯಕ್ರಮಗಳು ಸ್ಥಗಿತಗೊಳ್ಳುವುದಿಲ್ಲ ಎಂದರು. ಬರುವ ದಿನಗಳಲ್ಲಿ ಜನರ ಆಸಕ್ತಿಯನ್ನು ನೋಡಿ ಯಾವ ಉದ್ಯಾನವನಗಳಲ್ಲಿ ಹೆಚ್ಚು ಜನ ಸೇರುತ್ತಾರೆಯೋ ಅಂತಹ ಉದ್ಯಾನವನಗಳಲ್ಲಿಯೂ ಸಹ ಸಂಧ್ಯಾರಾಗ, ಉದಯರಾಗ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಪ್ರವಾಸೋದ್ಯಮದ ದೃಷ್ಟಿಯಿಂದ ಜಿಲ್ಲೆಯು ಅತ್ಯಂತ ಶ್ರೀಮಂತವಾಗಿದ್ದು ಇಲ್ಲಿನ ಪ್ರವಾಸಿ ತಾಣಗಳನ್ನು ಹೊರ ಜಗತ್ತಿಗೆ ಪರಿಚಯಿಸಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈಗಾಗಲೇ ತಜ್ಞರ ಸಮಿತಿಯೊಂದು ರಚಿಸಲಾಗಿದೆ. ಈ ಸಮಿತಿಯು ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಸಮಗ್ರವಾದ ಅಧ್ಯಯನ ಮಾಡಿ ಒಂದು ತಿಂಗಳೊಳಗಾಗಿ ನಿಖರ, ಸಮಗ್ರವಾದ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ವರದಿ ಕೈ ಸೇರಿದ ನಂತರ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗದುಗಿನ ತ್ರಿಕೂಟೇಶ್ವರ ದೇವಸ್ಥಾನ, ವೀರನಾರಾಯಣ ದೇವಸ್ಥಾನ, ಜುಮ್ಮಾ ಮಸೀದಿ ಒಳಗೊಂಡ ಏಕೈಕ ಟ್ರಸ್ಟ ಹೊಂದಿರುವದನ್ನು ಗದಗನಲ್ಲಿ ಮಾತ್ರ ಕಾಣಬಹುದಾಗಿದೆ. ಸಾಂಸ್ಕøತಿಕ ಗತವೈಭವ ಹಾಗೂ ಸಂಬಂಧಗಳನ್ನು ಬೆಸೆಯುವಲ್ಲಿ ಇದು ತನ್ನದೇ ಆದ ಪರಿಣಾಮಕಾರಿ ಪಾತ್ರ ವಹಿಸಲಿದೆ. ಇದಕ್ಕೆ ಜಿಲ್ಲೆಯ ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ ಎಂದು ಸಚಿವರಾದ ಡಾ. ಎಚ್.ಕೆ.ಪಾಟೀಲ ತಿಳಿಸಿದರು.
ಕಾರ್ಯಕ್ರಮದ ಉಪಸ್ಥಿತಿ ವಹಿಸಿದ್ದ ವಿಧಾನಪರಿಷತ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿ ಸ್ಪರ್ಧಾತ್ಮಕ ಹಾಗೂ ಒತ್ತಡದ ಪರಿಸ್ಥಿತಿಯಲ್ಲಿ ಮನಸ್ಸಿಗೆ ಮುದ ನೀಡುವ ಇಂತಹ ಸಂಗೀತ ಕಾರ್ಯಕ್ರಮಗಳು ಅವಶ್ಯಕವಾಗಿರುವಂತಹ ಇಂತಹ ಕಾರ್ಯಕ್ರಮಗಳ ಪುನರ ಪ್ರಾರಂಭಿಸುತ್ತಿರುವದು ಅತ್ಯಂತ ಶ್ಲಾಘನೀಯ ಸಂಗತಿಯಾಗಿದೆ ಎಂದರು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಪಕ್ಷಬೇಧ ಮರೆತು ಕಾರ್ಯನಿರ್ವಹಿಸಲಾಗುತ್ತಿದ್ದರೂ ಕೂಡ ಉತ್ತರ ಕರ್ನಾಟಕದ ನೀರಿಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ಇದಕ್ಕಾಗಿ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸುವದರ ಮೂಲಕ ಮುಂದಿನ ಪೀಳಿಗೆ ಸದಾ ನೆನಪಿನಲ್ಲಿಟ್ಟುಕೊಳ್ಳುವಂತಹ ಕಾರ್ಯವಾಗಬೇಕಾಗಿವೆ. ಎಚ್.ಕೆ.ಪಾಟೀಲರು ಸದಾ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವಂತಹ ವ್ಯಕ್ತಿಯಾಗಿದ್ದು ಇಂದು ಪ್ರವಾಸೋದ್ಯಮ ಇಲಾಖೆ ಸಚಿವರಾಗಿದ್ದು ಈ ಭಾಗದ ಅದೃಷ್ಟವಾಗಿದ್ದು ಉತ್ತರ ಕರ್ನಾಟಕವನ್ನು ಪ್ರವಾಸೋದ್ಯಮದಲ್ಲಿ ಉತ್ತುಂಗಕ್ಕೆ ಕರೆದೊಯ್ಯುವಂತಹ ಕಾರ್ಯಗಳಾಗಲಿ ಎಂದು ಆಶಿಸಿದರು.
ವೀರೇಶ್ವರ ಪುಣ್ಯಾಶ್ರಮದ ಪೀಠಾದಿಪತಿ ಡಾ. ಕಲ್ಲಯ್ಯಜ್ಜನವರು ಸಾನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ವ್ಯವಸ್ಥಾಪಕರ ನಿರ್ದೇಶಕ ಮನೋಜಕುಮಾರ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಗಳಾದ ಜಿ.ಜಗದೀಶ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ.ಬಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಉಪವಿಭಾಗಾಧಿಕಾರಿ ಅನ್ನಪೂರ್ಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ ಸೇರಿದಂತೆ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸರ್ವರನ್ನು ಸ್ವಾಗಿತಿಸಿದರು. ಬಾಬಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.
ಮನ ಸೆಳೆದ ಪೊಲೀಸ್ ವಾದ್ಯವೃಂದದ ಗೀತೆಗಳು: ಕಾರ್ಯಕ್ರಮದ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಡಿ.ಎಸ್.ಪಿ., ಶಿವಾನಂದ ಚನ್ನಬಸಪ್ಪನವರ, ಆರ.ಪಿ.ಐ ಶಂಕರ ಚೌದರಿ ಅವರುಗಳ ಮಾರ್ಗದರ್ಶನದಲ್ಲಿ ಗದಗ, ಶಿಗ್ಗಾವ, ಬೆಳಗಾವಿ ನಗರ ಘಟಕ, ಜಿಲ್ಲಾ ಘಟಕ, ಬಾಗಲಕೋಟ ಹಾಗೂ ವಿಜಯಪುರ ಜಿಲ್ಲಾ ಪೊಲೀಸ್ ವಾದ್ಯ ವೃಂದಗಳು ವಿಜಯ ಭಾರತಿ, ನಾಡಗೀತೆ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೇರೆ ದೇಶ ಕಿ ಧರತಿ, ಟುವ್ಹಿ-ಟುವ್ಹಿ ಎಂದು ಹಾಡುವೆ, ನೀಲೆ ಗಗನ್ ಕೆ-ತಲೆ, ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು, ಎ ಪ್ಯಾರ ಕಿ ನಗಮಾ ಹೈ, ಇದೇ ನಾಡು ಇದೇ ಭಾಷೆ, ಡ್ರಮರ್ಸ ಕಾಲ್, ಆನೇ ಸೇ ಉನಕೇ ಆಯೇ ಬಹಾರ್, ಏ ಮೇರೆ ವತನ ಕಿ ಲೋಗೋ, ಸಾರೇ ಜಹಾಂ ಸೆ ಅಚ್ಛೆ ಗೀತೆಗಳನ್ನು ಸುಶ್ರಾವ್ಯವಾಗಿ ನುಡಿಸಿ ಸಭಿಕರನ್ನು ಮಂತ್ರ ಮುಗ್ದಗೊಳಿಸಿದವು. ವಾದ್ಯ ತಂಡಗಳು ರಾಷ್ಟ್ರಗೀತೆ ನುಡಿಸುವದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಅಳ್ನಾವರ ಪೋಲಿಸ್ ಠಾಣೆಯ ಎ.ಎಸ್.ಐ ಆಗಿ ಕಾರ್ಯನಿರ್ವಹಿಸುತ್ತಿರುವ ಚಂದ್ರಕಾಂತ ಹುಟಗಿ ಅವರು ದಿನನಿತ್ಯ ಕರ್ತವ್ಯದಲ್ಲಿ ಬಳಸುವ ಫೈಬರ ಲಾಠಿಯಿಂದ ನುಡಿಸಿದ ಕೊಳಲು ವಾದನವು ಎಲ್ಲರನ್ನೂ ಮಂತ್ರಮುಗ್ದರನ್ನಾಗಿಸುವದರ ಜೊತೆಗೆ ಎಲ್ಲರ ಪ್ರಶಂಸೆಗೂ ಪಾತ್ರವಾದರು.