ಜಿಲ್ಲೆ

ಸಂಸ್ಕೃತಿ ನಮ್ಮ ಭೂಮಿಯೊಂದಿಗೆ ಬೆಸೆದುಕೊಂಡಿದೆ

ಆದರ್ಶ್. ಎಂ.ಕೆ.

ಮಡಿಕೇರಿ: ನಮ್ಮ ಸಂಸ್ಕೃತಿ ಈ ಭೂಮಿಯ ಕೃಷಿಯೊಂದಿಗೆ ಬೆಸೆದುಕೊಂಡಿದೆ ಎಂದು ವಿರಾಜಪೇಟೆ ಕ್ಷೇತ್ರ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.


.ಶೆಟ್ಟಿಗೇರಿಯ ಇಲ್ಲಿನ ಮೂಂದ್ ನಾಡ್ ಕೊಡವ ಸಮಾಜ ಆಶ್ರಯದಲ್ಲಿ ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿ, ಸಂಭ್ರಮ ಮಹಿಳಾ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಘ, ಕೊಡವ ತಕ್ಕ್ ಎಳ್ತ್‌ಕಾರಡ ಕೂಟ ಇವರ ಆಶ್ರಯದಲ್ಲಿ ಟಿ- ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆದ ೭ನೇ ವರ್ಷದ ಕಾವೇರಿ ಚಂಗ್ರಾಂದಿ ಪತ್ತಾಲೋದಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.


ಈ ಭೂಮಿಯೊಂದಿಗೆ ಪೂರ್ವಜರು ಹಾಗೂ ಹಿರಿಯರು ಹೊಂದಿದಂತಹ ಪೂಜನೀಯ ಭಾಂಧವ್ಯವನ್ನು ಇಂದು ಎಲ್ಲವನ್ನೂ ವಾಣಿಜ್ಯವಾಗಿ ಕಾಣುವ ಪರಿಯಿಂದ ನಾವು ಉಳಿಸಿಕೊಂಡಿಲ್ಲ. ಇದಕ್ಕೆ ನಮ್ಮ ಪೀಳಿಗೆಯೇ ಕಾರಣಕರ್ತರು ಇದನ್ನು ಸರಿಪಡಿಸುವ ಜವಾಬ್ದಾರಿಯು ಸಹ ನಮ್ಮೆಲ್ಲರ ಮೇಲೆ ಇದೆ ಎಂದು ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.


ಟಿ.ಶೆಟ್ಟಿಗೇರಿ ಕೊಡವ ಸಮಾಜ ಅಧ್ಯಕ್ಷ ಕೈಬುಲೀರ ಹರೀಶ್ ಅಪ್ಪಯ್ಯ ಮಾತನಾಡಿ, ಕೊಡಗಿನ ಪಾಳು ಬಿದ್ದಿರುವ ಸಹಸ್ರಾರು ಎಕರೆ ಭತ್ತದ ಗದ್ದೆಗಳನ್ನು ಕೃಷಿ ಭೂಮಿಯಾಗಿ ಸಂರಕ್ಷಣೆ ಮಾಡಲು ಮರುಕೃಷಿ ಮಾಡಿ ಪುನಶ್ಚೇತನಗೊಳಿಸಬೇಕು. ಈ ಮೂಲಕ ಅಂತರ್ಜಲ ವೃದ್ಧಿಸುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿ ಸಹಾಯಧನ ನೀಡಬೇಕೆಂದು ಮನವಿ ಮಾಡಿದರು.


ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಮಾತನಾಡಿ, ದೇಶದಲ್ಲಿ ೫೩ ಜನಾಂಗ ಮತ್ತು ಆ ಜನಾಂಗದ ಭಾಷೆ ಅಳಿವಿನ ಅಂಚಿನಲ್ಲಿದೆ. ಇದರಲ್ಲಿ ಕೊಡವ ಸಹ ಸೇರಿರುವುದು ಆತಂಕಕಾರಿ. ಕೊಡವರು ಹಲವು ದಶಕಗಳಿಂದ ದಸರಾ, ಗೌರಿ ಗಣೇಶ ಹಬ್ಬಗಳನ್ನು ಅತ್ಯಂತ ಅದ್ಧೂರಿಯಾಗಿ ನಡೆಸುತ್ತಾ ಬಂದಿದ್ದಾರೆ. ಆದರೆ, ತಮ್ಮದೇ ಜನಾಂಗದ ಹಬ್ಬಗಳ ಆಚರಣೆಯಲ್ಲಿ ಉದಾಸೀನ ಪ್ರವೃತ್ತಿ ತೋರಿಸುತ್ತಿದ್ದಾರೆ. ಆದ್ದರಿಂದ ಚಂಗ್ರಾಂದಿ ಪತ್ತಲೋದಿ ಹಬ್ಬವನ್ನು ೧೦ ದಿನಗಳ ಕಾಲ ವಿಶಿಷ್ಟವಾಗಿ ಆಚರಿಸುವ ಮೂಲಕ ಕೊಡವ ಭಾಷೆ ಸಂಸ್ಕೃತಿಯನ್ನು ಬೆಳೆಸಿ ಉಳಿಸುವ ಉದ್ದೇಶದಿಂದ ಆಚರಣೆ ಮಾಡಲಾಗುತ್ತಿದೆ ಎಂದರು.


ಕಾರ್ಯಕ್ರಮದಲ್ಲಿ ಶಾಸಕ ಪೊನ್ನಣ್ಣ, ದಾನಿ ಪಾರ್ವತಿ ಬೋಪಯ್ಯ, ಸಮಾಜದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರವಿಸುಬ್ಬಯ್ಯರವರನ್ನು ಸನ್ಮಾನಿಸಲಾಯಿತು. ಕೊಡವ ಸಮಾಜದ ಅಧ್ಯಕ್ಷ ಹರೀಶ್ ಅಪ್ಪಯ್ಯರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾನಿ ಕೈಬುಲೀರ ಪಾರ್ವತಿ ಬೋಪಯ್ಯ, ಕೊಡವ ಸಮಾಜದ ಮಾಜಿ ನಿರ್ದೇಶಕ ತೀತಿರ ಧರ್ಮಜ ಉತ್ತಪ್ಪ, ರೂಟ್ಸ್ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಕೇಚೆಟ್ಟಿರ ಮಮತಾ ಅರುಣ್, ತೀತಿರ ಮೀನಾ ಸತೀಶ್, ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ ಇತರರು ಹಾಜರಿದ್ದರು.