ನಾಪೋಕ್ಲು: ಮುಂದಿನ ತಲೆ ಮಾರಿಗೆ ನಮ್ಮ ಭಾಷೆ ಸಾಹಿತ್ಯ ಸಂಸ್ಕೃತಿಯನ್ನು ಒಯ್ಯಬೇಕಾದರೆ ನಮ್ಮ ಯುವ ಜನತೆ ಸಾಹಿತ್ಯಾಸಕ್ತರಾಗಿದ್ದರೆ ಮಾತ್ರ ಸಮಾಜದಲ್ಲಿ ಉತ್ತಮ ಸಾಮರಸ್ಯ ನಿರ್ಮಾಣ ಮಾಡಲು ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲರಾದ ಕೊಂಬಾರನ ಕುಂತಿ ಬೋಪಯ್ಯ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರಿ ಪ್ರೌಢಶಾಲೆ ಕಡಗದಾಳು ಇವರ ಸಂಯುಕ್ತ ಆಶ್ರಯದಲ್ಲಿ 2024-25ನೇ ಸಾಲಿನ ದಿ.ಗಂಗಮ್ಮ ರಾಚಪ್ಪ ಅವರ ಜ್ಞಾಪಕಾರ್ತ ದತ್ತಿ ಉಪನ್ಯಾಸ ಮತ್ತು ರಾಷ್ಟ್ರೀಯ ಆವಿಷ್ಕಾರ ಸಪ್ತಾಹದ ಅಂಗವಾಗಿ ನೀರಿನ ಸಂರಕ್ಷಣೆ ಅಂತರ್ಜಲ ಹೆಚ್ಚಳ ಮತ್ತು ಮಳೆ ಕೊಯ್ಲು ಕುರಿತ ಕಡಗದಾಳು ಪ್ರೌಢಶಾಲಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಯುವ ಜನಾಂಗದ ಪಾತ್ರ ಕುರಿತ ದತ್ತಿ ಉಪನ್ಯಾಸದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಯುವ ಜನರಿಂದ ಸಾಧ್ಯವಿದೆ ಭಾಷೆಯ ಬೆಳವಣಿಗೆ ಬಳಸುವಿಕೆಯ ಮೂಲಕ ಯುವಜನರು ತಮ್ಮದೇ ಆದ ಶೈಲಿಯಲ್ಲಿ ಬರೆಯುವ ಮೂಲಕ ಭಾಷೆಗೆ ಹೊಸ ರೂಪ ನೀಡುವುದೇ ಅಲ್ಲದೆ ಉಳಿಸಿ ಬೆಳೆಸಬಹುದು ಯುವಜನರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಹಾಗೂ ಸಾಹಿತ್ಯ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದಲೂ ಈ ಕ್ಷೇತ್ರ ಇನ್ನಷ್ಟು ಶ್ರೀಮಂತ ಗೊಳ್ಳುವುದರಲ್ಲಿ ಸಂದೇಹವಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಯುವ ಜನರು ತೊಡಗಿಸಿಕೊಳ್ಳುವುದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಮೊಬೈಲ್-ಟಿವಿಯಿಂದ ದೂರವಾಗಿ ಪುಸ್ತಕದ ಕಡೆ ಮುಖ ಮಾಡಿ ಹಿರಿಯ ಸಾಹಿತಿಗಳ ಒಡನಾಟದಿಂದ ಸಾಹಿತ್ಯ ಕೃಷಿಗೆ ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಕಡಗದಾಳು ಪ್ರೌಢಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಕೆ.ನಾಸಿರ್ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ನಮ್ಮ ದೇಶದ ಸಂಪತ್ತು, ಶಿಕ್ಷಣದಿಂದ ಮಾತ್ರ ದೇಶದ ಸರ್ವಾಂಗೀಣ ಏಳಿಗೆ ಕಾಣಬಹುದು, ಉತ್ತಮ ಶಿಕ್ಷಣ ಪಡೆಯುವ ಮೂಲಕ ಸತ್ಪ್ರಜೆಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಮಾತನಾಡಿ, ದತ್ತಿ ಕಾರ್ಯಕ್ರಮಗಳಲ್ಲಿ ನೀಡುವ ಉಪನ್ಯಾಸಗಳಿಂದ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಗಳು ದೊರೆಯುತ್ತವೆ. ಕೊಡಗು ಜಿಲ್ಲೆಯಲ್ಲಿ 36 ದತ್ತಿ ನಿಧಿ ಸ್ಥಾಪನೆಯಾಗಿದ್ದು ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರೌಢಶಾಲೆಗಳಲ್ಲಿ ದತ್ತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ನಗರಸಭೆಯ ಕಿರಿಯ ಅಭಿಯಂತರ ಎನ್.ಪಿ. ಹೇಮ ಕುಮಾರ್ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಸಿ.ಸಿ.ಡೈಸಿ ಮಾತನಾಡಿ, ಕನ್ನಡ ಸಾಹಿತ್ಯದ ಬೆಳವಣಿಗೆ ಹಾಗೂ ಅಂತರ್ಜಲ ಸಂರಕ್ಷಣೆ ನಮ್ಮ ಜೀವನದ ಪ್ರಮುಖ ಅಂಶಗಳೇ ಆಗಿವೆ ವಿದ್ಯಾರ್ಥಿಗಳು ಉಪನ್ಯಾಸದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಎಲ್ಲಾ ಶಾಲೆಗಳ ಶಿಕ್ಷಕರು ಸಾಹಿತ್ಯ ಪರಿಷತ್ತಿನ ಸದಸ್ಯರಾಗುವಂತೆ ಮನವಿ ಮಾಡಿದರು.
ವಿದ್ಯಾರ್ಥಿಗಳಿಗೆ ಭಾಷಣ ಹಾಗೂ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಭಾಷಣ ಸ್ಪರ್ಧೆಯಲ್ಲಿ ಮೊಹಮದ್ ವಿಯಾಸ್ ಪ್ರಥಮ, ತನಿಶ್ರೀ ದ್ವಿತೀಯ, ಡಿ.ರೇಶ್ಮಾ ತೃತಿಯ ಪಡೆದರು. ಚಿತ್ರಕಲೆ ಸ್ಪರ್ಧೆಯಲ್ಲಿ ಬಿ.ಎಸ್.ಹರ್ಷಿತಾ ಪ್ರಥಮ, ಆಶಿಕಾ ದ್ವಿತೀಯ, ಮಹಮ್ಮದ್ ಶರೀಫ್ ತೃತೀಯ, ಸಂಜನಾ ನಾಲ್ಕನೇ, ಸುಹಾನಾ ಐದನೇ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿ ಸಿದ್ದರಾಜು ಬೆಳ್ಳಯ್ಯ, ತೋಟಗಾರಿಕೆ ಇಲಾಖೆಯ ಜಿಲ್ಲಾ ಸಂಯೋಜಕ ಮಹಾದೇವ,ಪ್ರೌಢಶಾಲಾ ಶಿಕ್ಷಕ ಪವಿತ್ರಾ, ವಂದನಾ, ಕಿರಣ್, ಕೃಷ್ಣ ಕುಮಾರಿ, ನಾಗವೇಣಿ ಇತರರಿದ್ದರು.