ಜಿಲ್ಲೆ

ಜಾನಪದ ಕ್ರೀಡೆ ಉಳಿದರೆ ಸಂಸ್ಕೃತಿ ಉಳಿಸಿಕೊಳ್ಳಲು ಸಾಧ್ಯ

ಸೋಮವಾರಪೇಟೆ: ಜಾನಪದ ಕಲೆ ಮತ್ತು ಕ್ರೀಡೆಗಳು ಉಳಿದರೆ ಮಾತ್ರ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.

ಕೊಡಗು ಜಿಲ್ಲಾ ಜಾನಪದ ಪರಿಷತ್ ಸೋಮವಾರಪೇಟೆ ಘಟಕ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಜಾನಪದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಜಾನಪದ ಕಲೆ ಮತ್ತು ಕ್ರೀಡೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆಗಾಗ್ಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜಾನಪದ ಕ್ರೀಡಾಕೂಟಗಳು ನಡೆಯುತ್ತಿರಬೇಕು. ಪ್ರತಿಯೊಬ್ಬರೂ ಭಾಗವಹಿಸಬೇಕು. ಜಾನಪದ ಪ್ರತಿಭೆಗಳು ಎಲೆಮರೆ ಕಾಯಿಯಂತಾಗಬಾರದು. ಅವರ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಜಾನಪದ ಕ್ರೀಡೆಗಳು ಮನರಂಜನೆಯ ಜತೆಗೆ ಮನುಷ್ಯನ ದೈಹಿಕ ಸಾಮರ್ಥ್ಯ ಮನಸ್ಥಿತಿಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯ. ತಮ್ಮ ಬಾಲ್ಯದಲ್ಲಿ ಮರಕೋತಿ ಆಡಿದ್ದು, ಬುಟ್ಟಿಗಟ್ಟಲೆ ಕಿತ್ತಳೆ ಹಣ್ಣು ತಿಂದಿದ್ದು ಮತ್ತು ರಜೆ ದಿನಗಳಲ್ಲಿ ದನ ಕಾಯುತ್ತ ಸಂಭ್ರಮಪಟ್ಟಿದ್ದನ್ನು ನೆನಪಿಸಿಕೊಂಡರು. ಈಗಿನ ಮಕ್ಕಳು ಮೊಬೈಲ್‌ನಲ್ಲಿ ಆಟವಾಡಲು ಪ್ರಾರಂಭಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಾತ್ರ ಜಾನಪದ ಕಲೆ ಮತ್ತು ಕ್ರೀಡೆಯಲ್ಲಿ ಮಕ್ಕಳು ತೊಡಗಿಸಿಕೊಳ್ಳುತ್ತಿದ್ದಾರೆ. ಪ್ರತಿ ಶಾಲಾ ಕಾಲೇಜಿನಲ್ಲಿ ಜಾನಪದ ಕ್ರೀಡಾಕೂಟಗಳನ್ನು ಅಯೋಜಿಸಬೇಕು ಎಂದು ಹೇಳಿದರು.

ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಅನಂತಶಯನ ಮಾತನಾಡಿ, ಜಾನಪದ ಸೊಗಡಿನ ಆಟಗಳು ಜನ ಮಾನಸದಿಂದ ದೂರ ಸರಿಯದಂತೆ ಮಾಡುವುದೆ ಜಾನಪದ ಪರಿಷತ್‌ನ ಕಾಯಕವಾಗಿದೆ. ಜಾನಪದ ಆಟಗಳಲ್ಲಿ ನಮ್ಮ ನಾಡಿನ ಸಾಂಸ್ಕೃತಿಕ, ಸಾಮಾಜಿಕ ಆಂಶಗಳನ್ನು ಕಾಣಬಹುದಾಗಿದೆ. ಮನುಷ್ಯ ಸಂಬಂಧದ ಸಾಮರಸ್ಯವನ್ನು ಹೆಚ್ಚಿಸುವ ಆಟಗಳು ಮರೆಯಾಗುತ್ತಿರುವುದು ವಿಷಾದನೀಯ ಎಂದರು.

ಜಾನಪದದ ಅರ್ಥ, ವಿಚಾರ, ಸಾಹಿತ್ಯವನ್ನು ಅರಿಯಬೇಕು, ಕಲಿಯಬೇಕು, ಜೀವನದಲ್ಲಿ ಅಳವಡಿಸಿಕೊಂಡು ಜಾನಪದಿಯನಾಗಿ ಹೊರಹೊಮ್ಮಬೇಕು. ಒಬ್ಬ ಜಾನಪದಿಯನಲ್ಲಿ ಭೇದಭಾವ ಬರಲು ಸಾಧ್ಯವೇ ಇಲ್ಲ. ಅವರು ಶತ್ರುವನ್ನು ಪ್ರೀತಿಸುತ್ತಾರೆ. ಪ್ರಕೃತಿಯನ್ನು ಅರಾಧಿಸುತ್ತಾರೆ. ಮನಸ್ಸು ವಿಶಾಲವಾಗಿರುತ್ತದೆ. ಗಾಳಿ, ನೀರು, ಸೂರ್ಯನನ್ನು ನಂಬುತ್ತಾರೆ. ಆ ಮೂವರು ಮಾತ್ರ ಜೀವರಾಶಿಗಳನ್ನು ಸಮಾನವಾಗಿ ನೋಡುತ್ತಾರೆ ಎಂಬುದು ಅವರ ನಂಬಿಕೆಯಾಗಿರುತ್ತದೆ. ಅಂತಹವರಿಂದ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ಮಾತನಾಡಿ, ಗ್ರಾಮೀಣ ಕ್ರೀಡೆಗಳನ್ನು ಜೀವಂತವಾಗಿಡಬೇಕೆಂಬ ಸದುದ್ದೇಶದಿಂದ ಇಂತಹ ಕ್ರೀಡಾಕೂಟಗಳನ್ನು ಪ್ರತಿವರ್ಷ ನಡೆಸಲಾಗುತ್ತಿದೆ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಚ್.ಎನ್.ತಂಗಮ್ಮ, ಸುಶೀಲಾ ಹಾನಗಲ್, ರೇಣುಕಾ ವೆಂಕಟೇಶ್, ಯಡೂರು ಮಲ್ಲಪ್ಪ, ಅರುಣ್ ಕೊತ್ನಳ್ಳಿ, ವಿಸ್ಮಯಿ, ಡಾ.ಮಂತರ್‌ಗೌಡ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪರಿಷತ್‌ನ ತಾಲೂಕು ಅಧ್ಯಕ್ಷ ಕೆ.ಎ.ಪ್ರಕಾಶ್, ಪ್ರಾಂಶುಪಾಲರಾದ ಡಾ.ಹರ್ಷ, ಜಯವೀರಮಾತೆ ದೇವಾಲಯದ ಧರ್ಮಗುರು ಅವಿನಾಶ್, ಹಾನಗಲ್ ಗ್ರಾಮ ಪಂಚಾಯಿತಿ ಸದಸ್ಯ ಡಿ.ಎಸ್.ಸುರೇಶ್, ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಮುನೀರ್ ಆಹಮ್ಮದ್ ಇದ್ದರು. ಪರಿಷತ್‌ನ ಕವಿತ ವಿರೂಪಾಕ್ಷ ಕಾರ್ಯಕ್ರಮ ನಿರ್ವಹಿಸಿದರು.

ಶಾಲಾ, ಕಾಲೇಜು ವಿದ್ಯಾರ್ಥಿಗಳು ಬುಗುರಿ, ಚಿನ್ನದಾಂಡು, ಕಾಳುಹೆಕ್ಕುವುದು, ಕಪ್ಪೆ ಕುಪ್ಪಳಿಸುವುದು, ಲಗೋರಿ, ಕುಂಟಬಿಲ್ಲೆ ಆಟಗಳನ್ನು ಆಡಿ ಸಂಭ್ರಮಿಸಿದರು. ಸಾರ್ವಜನಿಕರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಸಂತೋಷಪಟ್ಟರು. ಶಾಸಕ ಡಾ.ಮಂತರ್‌ಗೌಡ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಕೆ ಒಡೆದು ಪ್ರೇಕ್ಷಕರನ್ನು ರಂಜಿಸಿದರು.